ಮೈಸೂರು: ಇದೇ ನವೆಂಬರ್.3ರಂದು ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದೇವರಾಜ ಅರಸು ಪ್ರತಿಮೆ ಅನಾವರಣ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಗೀತೆಯಲ್ಲಿ ಬೌದ್ಧ ಎಂಬ ಪದ ಸೇರಿಸುವ ಆಗ್ರಹ ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಬೌದ್ಧ ಸಮ್ಮೇಳನದಲ್ಲಿ ಈ ಬಗ್ಗೆ ಮನವಿ ಕೊಡಲಾಗಿದೆ. ಮನವಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದರು.
ಇನ್ನು ನವೆಂಬರ್.3ರಂದು ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದೇವರಾಜ ಅರಸು ಪ್ರತಿಮೆ ಅನಾವರಣ ಮಾಡುತ್ತೇವೆ. ಸಿಎಂ ಕೈಯಲ್ಲೇ ಪ್ರತಿಮೆ ಅನಾವರಣ ಮಾಡಿಸುವ ಸಲುವಾಗಿ ವಿಳಂಬವಾಗಿತ್ತು. ನಾವೇ ಮಾಡಿದರೆ ಅಷ್ಟೊಂದು ಮಹತ್ವ ಬರುವುದಿಲ್ಲ. ಸಿಎಂ ಪ್ರತಿಮೆ ಅನಾವರಣ ಮಾಡಲಿ ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದರು.
ಇದನ್ನು ಓದಿ: ಕನ್ನಡ ರಾಜ್ಯೋತ್ಸವ: ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಇನ್ನು ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ನವೆಂಬರ್‌ನಲ್ಲಿ ಕ್ರಾಂತಿಯೂ ಇಲ್ಲ ಬ್ರಾಂತಿಯೂ ಇಲ್ಲ. ಯಾವಾಗ ಏನು ಆಗಬೇಕು ಎಂಬುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ, ಇರುತ್ತಾರೆ. ಸಚಿವರಾಗಬೇಕು ಎಲ್ಲರಿಗೂ ಆಸೆ ಇರುತ್ತದೆ. ಆಸೆ ತಪ್ಪು ಎಂದು ಹೇಳುವುದಿಲ್ಲ. ಇದು ಸಹಜ ಅಷ್ಟೇ. ನಮ್ಮಲ್ಲಿ ಏನೇ ತೀರ್ಮಾನ ಆದ್ರು ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇನ್ನು ಸಂಪುಟ ಸಭೆ ಸಚಿವ ಜಾರ್ಜ್ ಜೊತೆಗೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಂಪುಟ ಸಭೆ ಸೇರುವುದೇ ಚರ್ಚೆಗಾಗಿ. ಅದು ಚರ್ಚೆ ಅಷ್ಟೇ ಗಲಾಟೆ ಅಲ್ಲ. ಒಂದು ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವೆ. ನಂತರ ಅದಕ್ಕೆ ಪರಿಹಾರವು ಸಿಕ್ಕಿದೆ. ಅಲ್ಲಿಗೆ ಎಲ್ಲವೂ ಮುಗಿದಿದೆ ಅಷ್ಟೇ ಎಂದು ಹೇಳಿದರು.





