ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ಇಂದು ಕಾಡಾದಲ್ಲಿರುವ ನೀರಾವರಿ ಇಲಾಖೆಯ ದಕ್ಷಿಣ ವಲಯ ಮುಖ್ಯ ಎಂಜಿನಿಯರಿಂಗ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜುಲೈ.15ರಿಂದ ಕೆರೆಕಟ್ಟೆಗಳಿಗೆ ಹಾಗೂ ಜುಲೈ.25ರಿಂದ ಕಟ್ಟು ಪದ್ಧತಿಯ ಆಧಾರದಲ್ಲಿ ಕಬಿನಿ ಜಲಾಶಯದ ನಾಲೆಗಳಿಗೆ ನೀರು ಹರಿಸುವುದಾಗಿ ಪ್ರಕಟಿಸಿದರು.
ಕಟ್ಟು ನೀರು ಪದ್ಧತಿಯಲ್ಲಿ (ತಿಂಗಳಲ್ಲಿ 15 ದಿನ ಹರಿಸಿ, 10 ದಿನ ನಿಲ್ಲಿಸುವುದು) ನೀರು ಹರಿಸುವುದಾಗಿ ಸಚಿವರು ಹೇಳಿದರು.
ಸಭೆಯಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು, ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಎಂಎಲ್‌ಸಿ ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೇರಿದಂತೆ ಹಲವರು ಭಾಗಿಯಾಗಿದ್ದರು.





