ಮೈಸೂರು: ನಗರದ ನಜರ್‌ಬಾದ್‌ನಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಸುಮಾರು 40 ಮರಗಳನ್ನು ಕಡಿದು ಉರುಳಿಸಿದ ಪ್ರಕರಣ ಮಾಸುವ ಮುನ್ನವೇ ಇದೀಗ ಮೈಸೂರಿನ ಉತ್ತನಹಳ್ಳಿಯ ತ್ರಿಪುರ ಸುಂದರಿ ಜ್ವಾಲಾಮುಖಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಮರಗಳ ಕಟಾವಿಗೆ ಸಿದ್ಧತೆ ನಡೆದಿದೆ.
ರಸ್ತೆ ಅಗಲೀಕರಣವಾಗುತ್ತಿರುವ ಹಿನ್ನೆಲೆಯಲ್ಲಿ 25 ಮರಗಳನ್ನ ಕಡಿದು ಹಾಕಲು ಸಿದ್ಧತೆ ನಡೆದಿದ್ದು, ಕಟಾವು ಮಾಡಬೇಕಿರುವ ಮರಗಳನ್ನು ಈಗಾಲೇ ಗುರುತು ಮಾಡಲಾಗಿದೆ.
ಬೃಹತ್ ಮರಗಳನ್ನ ಕತ್ತರಿಸಲು ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಗಲೀಕರಣಕ್ಕಾಗಿ ಪಕ್ಕದಲ್ಲೇ ಇರುವ ಬೃಹದಾಕಾರದ ಹೊಂಗೆ, ಅರಳಿ, ಆಲದಮರಗಳ ಮೇಲೆ ನಮೂದು ಮಾಡಲಾಗಿದ್ದು, ರೈತ ಸಂಘಟನೆಗಳು ಪಾಲಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿವೆ.
ಈ ಬಗ್ಗೆ ಮಾತನಾಡಿರುವ ರೈತ ಮುಖಂಡರು, ಯಾವುದೇ ಕಾರಣಕ್ಕೂ ಇಲ್ಲಿನ ಮರಗಳನ್ನು ಕಡಿಯಲು ಬಿಡಲ್ಲ. ಒಂದು ವೇಳೆ ಮರ ಕಡಿಯಲು ಮುಂದಾದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ರೈತರು ಹಾಗೂ ವಿವಿಧ ಸಂಘಟನೆಗಳು ಒಂದೆಡೆ ಮರಗಳ ಉಳಿವಿಗಾಗಿ ನಗರದ ರಸ್ತೆಗಳಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ಇತ್ತ ಬೆಳೆದು ನಿಂತಿರುವ ಬೃಹತ್ ಗಾತ್ರದ ಮರಗಳಿಗೆ ಅಧಿಕಾರಿಗಳು ಕೊಡಲಿ ಇಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಹಾಗೂ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯ ಹಾದಿ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.





