ಮೈಸೂರು: ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಲಿದ್ದಾರೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ನವೆಂಬರ್‌ನಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗುತ್ತಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ಪುನರ್ ರಚನೆ ಸಂಪೂರ್ಣ ಸಿಎಂ ಗೆ ಬಿಟ್ಟ ವಿಚಾರ. ಸಿಎಂ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಡಿನ್ನರ್ ಮೀಟಿಂಗ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ. ಆರ್‌ವಿ.ದೇಶಪಾಂಡೆ ಹೇಳಿಕೆಗೆ ನೋ ರಿಯಾಕ್ಷನ್ ಎಂದರು.
ಇನ್ನು ಆರ್‌ಎಸ್‌ಎಸ್ ಬಗ್ಗೆ ಮಾತಾಡಿದ ನಂತರ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರಿಗೆ ಬೆದರಿಕೆ ಕರೆ ಬಂದಿರಬೇಕು ಹಾಗಾಗಿ ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕ ಖರ್ಗೆ ಅವರಿಗೆ ಅನ್ನಿಸಿದನ್ನು ಹೇಳಿದ್ದಾರೆ. ಕಿಡಿಗೇಡಿಗಳು ಅವರಿಗೆ ಬೆದರಿಕೆ ಹಾಕಿರೋದಕ್ಕೆ ಟ್ವೀಟ್ ಮಾಡಿದ್ದಾರೆ. ಮೋದಿ ಸರ್ಕಾರ ಬಂದ ಮೇಲೆ ಇಂತಹ ಕಿಡಿಗೇಡಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಎಂಬ ಮಾತಿದೆ.
ಇದನ್ನು ಓದಿ: ಅಕ್ಟೋಬರ್.17ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ: ಸಚಿವ ಡಾ.ಶರಣ ಪ್ರಕಾಶ್ ಆರ್ ಪಾಟೀಲ್
ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣ ಇರಬಹುದು. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದೂ ಕೂಡ ಮೋದಿ ಸರ್ಕಾರ ಬಂದ ನಂತರವೇ ಆಗುತ್ತಿದೆ. ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಇದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಅರ್ಥ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದಲೇ ಈ ರೀತಿ ಘಟನೆಗಳು ನಡೆಯುತ್ತಿವೆ. ಇಂತಹ ಘಾತುಕ ಶಕ್ತಿಗಳಿಗೆ ಬೆಂಬಲ ಕೊಡ್ತಿರೋದು ಬಿಜೆಪಿ ಆರ್‌ಎಸ್‌ಎಸ್ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಲಬುರ್ಗಿ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಹಲವು ದಿನಗಳ ಬಳಿಕವೂ ಸರ್ಕಾರಿ ಪ್ರತಿನಿಧಿಗಳು ಸಂತ್ರಸ್ತರನ್ನು ಭೇಟಿಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ತಬ್ಬಿಬ್ಬಾದ ಸಚಿವರು, ನಾನು ಟೂರ್‌ನಲ್ಲಿ ಇದ್ದೀನಿ. ಈ ಬಗ್ಗೆ ಪ್ರಿಯಾಂಕ ಖರ್ಗೆ ಜೊತೆ ಕೂಡ ಮಾತಾಡುವೆ. ಅದಷ್ಟು ಬೇಗ ಅವರನ್ನು ಭೇಟಿ ಮಾಡಿ, ಸಾಂತ್ವನ ಹೇಳುತ್ತೇನೆ ಎಂದರು.





