ಮೈಸೂರು: ಪೊಲೀಸ್ ಅಧಿಕಾರಿಯ ಬಳಿ ಸಿಎಂ ಸಿದ್ದರಾಮಯ್ಯ ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಬೈದ ಕಾರಣ ಪೊಲೀಸ್ ಅಧಿಕಾರಿ ಸ್ವಯಂ ನಿವೃತ್ತಿ ಘೋಷಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಮಾನಸಿಕವಾಗಿ ಕುಗ್ಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದ್ದರೆ, ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿ. ಈ ರೀತಿ ಬಹಿರಂಗವಾಗಿ ಅಧಿಕಾರಿಗೆ ಅವಮಾನ ಮಾಡುವುದು ಸರಿಯಲ್ಲ. ಇದು ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ ಎಲ್ಲೂ ಆಗಬಾರದು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಸ್ಪರ ಗೌರವ ಕೊಟ್ಟು ಕೆಲಸ ಮಾಡಬೇಕು.
ಸಿಎಂ ಸಿದ್ದರಾಮಯ್ಯ ನಡೆದುಕೊಂಡು ರೀತಿಯನ್ನು ಎಲ್ಲರೂ ಮಾಧ್ಯಮಗಳಲ್ಲಿ ನೋಡಿದ್ದಾರೆ. ಸಿಎಂ ಸಿದ್ದರಾಮಯ್ಯ ವರ್ತನೆ ಸರಿ ಇರಲಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಆದೇಶ ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದರೆ ಅದನನು ಕೇಳಲು ಸಾಕಷ್ಟು ಮಾರ್ಗಗಳಿವೆ. ಅದನ್ನ ಬಿಟ್ಟು ಈ ರೀತಿ ನಿಂದಿಸಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡುವುದಿಲ್ಲ ಎಂದರು.
ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಆಂತರಿಕ ಕಚ್ಚಾಟದಿಂದ ಆಡಳಿತ ಯಂತ್ರ ಕುಸಿದಿದೆ. ಪ್ರಾಣಿಗಳ ಸಾವು, ಚಾಮುಂಡಿ ಬೆಟ್ಟದ ನಿರ್ವಹಣೆ ಸೇರಿ ಎಲ್ಲಾ ವಲಯದಲ್ಲಿ ವಿಫಲವಾಗಿದೆ. ಇದೆಲ್ಲಾ ಬಿಟ್ಟು ಸರ್ಕಾರ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದರು.
ಇನ್ನು ಚಾಮರಾಜನಗರದಲ್ಲಿ ಹುಲಿಗಳು ಹಾಗೂ ಕೋತಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಸಂಬಂಧ ಚಾಮರಾಜನಗರದ ಯಾವುದೇ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಇದೊಂದು ಗಂಭೀರ ಸಮಸ್ಯೆ ಆಗಿದೆ. ಯಾಕೆ ಅವರಿಗೆ ಅರ್ಥ ಆಗುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ನಾನು ಮಾತ್ರವೇ ಧ್ವನಿ ಎತ್ತುವ ಕೆಲಸ ಆಗುತ್ತಿದೆ. ಅರಣ್ಯ ರಾತ್ರಿ ಸಂಚಾರದ ಬಗ್ಗೆ ಕೂಡ ಸದನದಲ್ಲಿ ನಾನೊಬ್ಬನೇ ದನಿ ಎತ್ತುತ್ತಿದ್ದೇನೆ. ಚಾಮರಾಜನಗರ ಜನಪ್ರತಿನಿಧಿಗಳು ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಬೇಕು. ಅರಣ್ಯ ಅಧಿಕಾರಿಗಳು ಸಭೆ ಕರೆದಾಗಲೂ ಯಾರೂ ಬರುವುದಿಲ್ಲ. ಅರಣ್ಯದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದುಕೊಂಡಿದ್ದಾರೆ. ಆದರೆ ನಮಗೆ ಎಲ್ಲ ಗೊತ್ತಿದೆ. ಚಾಮರಾಜನಗರ ಶೇಕಡಾ 50ಕ್ಕೂ ಹೆಚ್ಚು ಅರಣ್ಯ ಹೊಂದಿದೆ. ಅದನ್ನ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.





