ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಗಳೇ ಅಂತಿಮ. ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಹೈಕಮಾಂಡ್ ನಾವೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಹೈಕಮಾಂಡ್ ತನ್ನ ತೀರ್ಮಾನ ಹೇಳುತ್ತದೆ. ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೇ ಅತೀ ಹೆಚ್ಚು ಚರ್ಚೆ ಮಾಡುತ್ತಿದ್ದೀರಾ. ನಾನು ಅಧಿವೇಶನದಲ್ಲಿ ಮಾತನಾಡಿದ ಮೇಲೂ ಈ ವಿಚಾರದಲ್ಲಿ ಯಾಕೆ ಪ್ರಶ್ನೆ ಕೇಳುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು.
ಇದನ್ನು ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ ಸಿದ್ದರಾಮಯ್ಯ
ಇನ್ನು ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜಣ್ಣ ಹಾಗೂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದರೆ ತಪ್ಪೇನಿದೆ. ಡಿ.ಕೆ .ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷ. ಅವರನ್ನು ಭೇಟಿ ಮಾಡಬಾರದು ಎಂದು ಏನಾದ್ರು ಇದ್ಯಾ. ಅದರಲ್ಲಿ ಯಾವ ತಪ್ಪು ಇಲ್ಲ ಎಂದರು.
ಇನ್ನು ಎಲ್ಲರಿಗಿಂತ ಪಕ್ಷ ದೊಡ್ಡದು ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಖರ್ಗೆ ಹೇಳಿರುವುದು ಸರಿ ಇದೆ. ನಾವು ಮೊದಲಿನಿಂದಲೂ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಹೇಳುತ್ತಿದ್ದೇವೆ ಎಂದರು. ಇನ್ನು ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಬೇಕೆಂಬ ಖರ್ಗೆ ಹೇಳಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಅವರು, ಸಮಸ್ಯೆಗಳು ಏನೇ ಇದ್ದರೂ ಅದನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದು ಹೇಳುವ ಮೂಲಕ ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದರು.





