ಮೈಸೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಗರಂ ಆದರು.
ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಸಿಎಂಗೆ ಸಚಿವ ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಶಾಸಕರಾದ ಪುಟ್ಟರಂಗಶೆಟ್ಟಿ, ರವಿಶಂಕರ್, ನರೇಂದ್ರ ಸ್ವಾಮಿ ಸೇರಿದಂತೆ ಹಲವರು ಸಾಥ್ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದರು. ಯಾರು ಏನೇ ಹೇಳಿದರೂ ಅದು ಮುಖ್ಯವಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನಾದರೂ ಹೇಳಿದ್ಯಾ? ಯಾಕೆ ಪದೇ ಪದೇ ಅದನ್ನೇ ಮಾತನಾಡುತ್ತೀರಾ.? ಈ ಬಗ್ಗೆ ಜನ ಮಾತನಾಡುತ್ತಿಲ್ಲ, ಮಾಧ್ಯಮದವರೇ ಪದೇ ಪದೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳುವುದು ಮಾತ್ರವೇ ಮುಖ್ಯ. ಅದೇ ನಮಗೆಲ್ಲಾ ಅಂತಿಮ. ನಾನು ಬಿಹಾರ ಚುನಾವಣೆ ಬಳಿಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ.
ಸಂಪುಟ ಪುನಾರಚನೆ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚೆ ಮಾಡುತ್ತೇನೆ. ಇದಕ್ಕಾಗಿಯೇ ನವಂಬರ್.15ರಂದು ದೆಹಲಿಗೆ ಹೋಗುತ್ತಿದ್ದೇನೆ. ಪುನಾರಚನೆ ಬಗ್ಗೆ ಹೈಕಮಾಂಡ್ ಏನು ಹೇಳುತ್ತದೆ ಆ ರೀತಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನು ಓದಿ : ರಾಜ್ಯದಲ್ಲಿ ತಾರಕಕ್ಕೇರಿದ ಸಿಎಂ ಬದಲಾವಣೆ ಚರ್ಚೆ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಅಹಿಂದ ಸಂಘಟನೆಗಳು
ಇನ್ನು ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಇಲ್ಲಿಯವರೆಗೆ ನನ್ನನ್ನು ಕರೆದಿಲ್ಲ, ಕರೆದರೆ ಹೋಗುತ್ತೇನೆ. ಬಿಹಾರದಲ್ಲಿ ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತೆ. ನಿತೀಶ್ ಕುಮಾರ್ ಬಗ್ಗೆ ಜನಕ್ಕೆ ಬೇಸರ ಬಂದಿದೆ. ನಿತೀಶ್ ಕುಮಾರ್‌ಗೆ ಯಾವುದೇ ಸಿದ್ಧಾಂತ ಇಲ್ಲ. ಅವರು ಎಲ್ಲಾ ಪಕ್ಷಗಳನ್ನು ಬದಲಾಯಿಸಿದ್ದಾರೆ. ಈ ಕಾರಣ ಜನ ಇಂಡಿಯಾ ಒಕ್ಕೂಟದ ಪರ ಮತ ಹಾಕುತ್ತಾರೆ. ನಮ್ಮ ಗ್ಯಾರಂಟಿಗಳನ್ನೇ ನಿತೀಶ್ ಕುಮಾರ್ ಅಲ್ಲಿ ಘೋಷಣೆ ಮಾಡಿದ್ದಾರೆ. ಆದರು ಅಲ್ಲಿಯ ಜನ ಅವರನ್ನು ಕೈ ಹಿಡಿಯುವುದಿಲ್ಲ. ಕರ್ನಾಟಕದಲ್ಲಿ ಬಿಹಾರದ ಮತದಾರರು ಇದ್ದಾರೆ. ಅವರಿಗೂ ನಮ್ಮ ಒಕ್ಕೂಟಕ್ಕೆ ಮತ ಹಾಕಿ ಎಂದು ಕೇಳುತ್ತೇವೆ. ಬಿಹಾರದಲ್ಲಿ ಅತಿ ಹೆಚ್ಚಿನ ಬಡವರು ಇದ್ದಾರೆ ಎಂದು ಹೇಳಿದರು.
ಇನ್ನು ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಮುಂದುವರಿಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಸತ್ಯ ಹೇಳುತ್ತೇನೆ ಕೇಳಿ. ಜನರು ಕಾಡಿನೊಳಗೆ ಓಡಾಡಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಾಣಿಗಳು ಹೊರಬರಲು ಪ್ರಾರಂಭಿಸಿವೆ. ಕಾಡಿನೊಳಗೆ ಪ್ರಾಣಿಗಳಿಗೆ ಮೇವು, ನೀರು ಸಿಗುತ್ತಿಲ್ಲ. ಇದರಿಂದಲೂ ನಾಡಿಗೆ ಪ್ರಾಣಿಗಳು ಬರುತ್ತಿದೆ. ಕಾಡಂಚಿನಲ್ಲಿ ಅಕ್ರಮ ರೆಸಾರ್ಟ್‌ಗಳು ಹೆಚ್ಚಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತೇವೆ. ಸಫಾರಿಗಳ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ಕಡಿಮೆ ಮಾಡುವ ಕೆಲಸ ಮಾಡುತ್ತೇವೆ. ಹುಲಿ ದಾಳಿ ಪ್ರಕರಣಕ್ಕೆ ನಾನೇ ಪ್ರತ್ಯೇಕ ಸಭೆ ಕರೆಯುತ್ತಿದ್ದೇನೆ ಎಂದರು.




