ಮೈಸೂರು: ಸಿಎಂ ಬದಲಾವಣೆ ಬಿಜೆಪಿಯ ಅಜೆಂಡಾ ಅಲ್ಲ ಎಂದು ಮಾಜಿ ಎಂಎಲ್‌ಸಿ ಗೋ ಮಧುಸೂಧನ್ ಹೇಳಿದ್ದಾರೆ.
ನವೆಂಬರ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿರುವ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅವರ ಶಾಸಕರಿಗೆ ಬಿಟ್ಟ ವಿಚಾರ. ಬೇರೆ ನಾಯಕರ ಅಭಿಪ್ರಾಯ ನನ್ನ ಅಭಿಪ್ರಾಯ ಅಲ್ಲ. ಕಾಂಗ್ರೆಸ್ ಶಾಸಕರು ಸಿಎಂ ಬೇಕು ಅಂದ್ರೆ ಸಿದ್ದರಾಮಯ್ಯ ಅವರೇ ಇರ್ತಾರೆ. ಬೇಡ ಅಂದ್ರೆ ಅವರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು.
ಇನ್ನು ಬಿಜೆಪಿಯಲ್ಲಿ ಬಣ ಬಡಿದಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲವಿದ್ರೆ ಹಿರಿಯರು ಸರಿ ಮಾಡುತ್ತಾರೆ. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ನಿಂತು ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮ ಆಗುತ್ತದೆ. ಕೆಲವರ ಮೇಲೆ ಈಗಾಗಲೇ ಕ್ರಮ ಆಗಿದೆ. ಇನ್ನು ಕೆಲವರ ಮೇಲೆ ತಡವಾದರೂ ಕ್ರಮ ಆಗೇ ಆಗುತ್ತದೆ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲಾ. ನಾವು ತತ್ವ ಸಿದ್ಧಾಂತದ ಮೇಲೆ ಪಕ್ಷ ಕಟ್ಟಿದವರು ಎಂದು ಹೇಳಿದರು.
ಇನ್ನು ತುರ್ತು ಪರಿಸ್ಥಿತಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಂದು ತುರ್ತು ಪರಿಸ್ಥಿತಿ ಇದ್ದಿದ್ದು ಇಂದಿರಾಗಾಂಧಿಗೆ, ದೇಶಕ್ಕಲ್ಲ. ಇಂದಿರಾಗಾಂಧಿ ವಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಿದರು. ಪತ್ರಿಕಾ ಸ್ವಾತಂತ್ರ್ಯದ ಹರಣ ಆಗಿತ್ತು. ಸರ್ವಾಧಿಕಾರಿ ಆಡಳಿತ ಮಾಡಿದ್ದರು. ನ್ಯಾಯಾಲಯಕ್ಕೂ ಗೌರವ ಸಿಗದಂತೆ ಮಾಡಿದ್ದರು. ಅಂದು ಇಂದಿರಾಗಾಂಧಿ ಹೇಳಿದ್ದೆ ಶಾಸನ ಎಂಬಂತೆ ಆಗಿತ್ತು. ಅದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಯಿತು. ಇಂದಿರಾಗಾಂಧಿ ಕರಾಳ ತುರ್ತು ಪರಿಸ್ಥಿತಿಗೆ ಇಂದು 50 ವರ್ಷ ತುಂಬಿದೆ ಎಂದರು.





