ಮೈಸೂರು: ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ ಎಂದು ಹೇಳಿದ ಮೇಲೆ ಮುಗೀತು. ಮತ್ತೆ ಇನ್ನೇನು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಡಿಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ.
ಹಾಗಾಗಿ ನಾನೇ 5 ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿದ ಮೇಲೆ ಮುಗಿತಲ್ಲ ಬಿಡಿ ಎಂದು ಸಿದ್ದು ಪರ ಬ್ಯಾಟ್ ಮಾಡಿದರು. ಇನ್ನು ಸಂಕ್ರಾಂತಿಯಂತೂ ನಡೆದೇ ನಡೆಯುತ್ತದೆ. ಸಿಎಂ, ಸುರ್ಜೇವಾಲ ಸ್ಪಷ್ಟಪಡಿಸಿದ ಮೇಲೆ ಯಾಕೆ ಮತ್ತೆ ಮತ್ತೆ ಪ್ರಶ್ನೆ ಕೇಳ್ತೀರಿ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.
ಇನ್ನು ಡಿಕೆಶಿ ಪಕ್ಷ ಕಟ್ಟಿದ್ದಾರೆ, ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷ ಕಟ್ಟಿದ್ರು ಅಂದ್ರೆ, ಎಲ್ಲರು ಸೇರಿದ್ರೆ ಅಲ್ವ ಅಣೆಕಟ್ಟು ಕಟ್ಟೋದು. ಅಣೆಕಟ್ಟನ್ನು ಕಲ್ಲು, ಮಣ್ಣು, ಜೆಲ್ಲಿ ಎಲ್ಲ ಸೇರಿಸಿ ಕಟ್ಟುತ್ತೇವೆ. ಹನಿ ಹನಿ ಗೂಡಿದ್ರೆ ಹಳ್ಳ ಎಂಬಂತೆ ಎಲ್ಲ ಸೇರಿ ಕಟ್ಟಿದ್ದಾರೆ. ಅದರಲ್ಲಿ ಡಿಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದನ್ನ ನಾವು ಇಲ್ಲ ಅನ್ನೋಕಾಗುತ್ತ? ಎಂದು ಪ್ರಶ್ನಿಸಿದ ಅವರು, ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಪಾತ್ರ ಇಲ್ವ. ಯಾರ್ ಯಾರಿಗೆ ಪಕ್ಷ ಜವಾಬ್ದಾರಿ ಕೊಟ್ಟಿದೆ ಆಗ ಎಲ್ಲರೂ ಕೆಲಸ ಮಾಡಿದ್ದಾರೆ. ಪ್ರಸ್ತಾಪಗಳು ಬೇಜಾನು ಬರುತ್ತವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಸಿಎಂ 5 ವರ್ಷ ನಾನೇ ಇರುತ್ತೇನೆ ಎಂದು ಹೇಳಿರುವಾಗ ಯಾವುದೇ ಪ್ರಶ್ನೆ ಇಲ್ಲ ಎಂದು ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿದರು.




