ಮೈಸೂರು: ನಾವು ಕೂಡ ತಾಲಿಬಾನಿಗಳ ರೀತಿ ಪ್ರತಿಕ್ರಿಯೆ ನೀಡಿದರೆ ಹಿಂದೆ ಮುಂದೆ ಮುಚ್ಚಿಕೊಂಡಿರುತ್ತಾರೆ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್ ಉದ್ದೇಶ. ಏಕೆಂದರೆ ನಾವು ತಾಲಿಬಾನಿಗಳ ರೀತಿ ಅವರಿಗೆ ಉತ್ತರ ಕೊಡುವುದಿಲ್ಲ. ಒಂದು ವೇಳೆ ತಾಲಿಬಾನಿಗಳ ರೀತಿ ಪ್ರತಿಕ್ರಿಯೆ ನೀಡಿದರೆ ಹಿಂದೆ ಮುಂದೆ ಮುಚ್ಚಿಕೊಂಡಿರುತ್ತಾರೆ ಎಂದು ಕಿಡಿಕಾರಿದರು.
ಇನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಮೊದಲು ಈ ರೀತಿ ಇರಲಿಲ್ಲ. ಮೊದಲು ಇದೇ ರೀತಿ ಇದ್ದಿದ್ದರೆ ಎಂಟು ಬಾರಿ ಅವರು ಗೆಲ್ಲುತ್ತಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷ ತಮ್ಮ ನಿಲುವನ್ನು ಅವರ ಬಾಯಿಯಿಂದ ಹೇಳಿಸುತ್ತಿದೆ. ಸಿಎಂ ಕೂಡ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೇ ಕಾಂಗ್ರೆಸ್‌ನವರು ಹಜ್ ಯಾತ್ರೆಗೆ ಯಾಕೆ ದುಡ್ಡು ಕೊಡುತ್ತಾರೆ. ಹಜ್ ಯಾತ್ರೆಗೆ ಹೋದರೆ ಬಡತನ ನಿರ್ಮೂಲನೆಯಾಗುತ್ತಾ ಎಂದು ಪ್ರಶ್ನೆ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಹಜ್ ಯಾತ್ರೆಗೆ ಯಾಕೆ ಸರ್ಕಾರ ದುಡ್ಡು ಕೊಡಬೇಕು. ಕೂಡಲೇ ಹಜ್ ಯಾತ್ರೆಯ ಸಬ್ಸಿಡಿ ನಿಲ್ಲಿಸಿಬಿಡಿ ನೋಡೋಣ. ನೀವು ನಮ್ಮನ್ನು ಕೆಣಕಿದ್ದಕ್ಕೆ ನಾವು ಇದನ್ನು ಕೇಳುತ್ತಿದ್ದೇವೆ. ಕುಂಭಮೇಳಕ್ಕೆ ಯಾರನ್ನೂ ಒತ್ತಡದಿಂದ ಕರೆಯುತ್ತಿಲ್ಲ. ಎಲ್ಲರೂ ಅವರ ನಂಬಿಕೆಯಿಂದ ಹೋಗುತ್ತಿದ್ದಾರೆ. ಅದನ್ನು ಯಾಕೆ ನೀವು ಪ್ರಶ್ನೆ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.