ಮೈಸೂರು: ಬಿಜೆಪಿಯವರು ಯಾವ ಕೆಲಸ ಮಾಡದೇ ಬರೀ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಮೊದಲ ಪ್ರಾದಾನ್ಯತೆ ಕೊಡುವುದು ಮೈಸೂರಿಗೆ. ಬಿಜೆಪಿಯವರು ಯಾವ ಕೆಲಸ ಮಾಡದೇ ಬರೀ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಟೀಕಾಚಾರಿಗಳು. ನಾವು ಏನು ಮಾಡಿದ್ದೇವೆ, ಅದು ಜನರ ಮುಂದಿದೆ. ನೀವು ಏನು ಕೆಲಸ ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ ಎಂದು ಆರೋಪಿಸಿದರು.
ನೆಹರೂ ಕಾಲದಲ್ಲಿ ಹಾಗೂ ಮಹಾರಾಜರ ಕಾಲದಲ್ಲೂ ದೊಡ್ಡ ದೊಡ್ಡ ಕಾರ್ಖಾನೆಗಳು ಏಳಿಗೆಗೆ ಬಂದಿವೆ. ಮೋದಿಯವರೇ ಹಾಗೂ ಮೋದಿ ಶಿಷ್ಯರೇ ನಿಮ್ಮ ಕೊಡುಗೆ ಏನು ಎಂದು ತಿಳಿಸಿ ಎಂದು ಸವಾಲು ಹಾಕಿದರು.
ಮೋದಿಯವರು ದಿನಾ ಬರೀ ಟಿವಿಯಲ್ಲಿ ಬರುವುದೇ ಆಗಿದೆ. ಆದರೆ ಗಲಭೆ ಎದ್ದಿರುವ ಮಣಿಪುರಕ್ಕೆ ಹೋಗಲು ಇದುವರೆಗೂ ಮೋದಿ ಪ್ರಯತ್ನ ಮಾಡಿಲ್ಲ. ಆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ದೇಶದ ಜನ ಸಂವಿಧಾನ ಬದಲಾವಣೆ ಮಾಡಲು ಬಿಡಲ್ಲ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರಿಗೆ ತಿರುಗೇಟು ನೀಡಿದರು.
ಇನ್ನು ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಹಂಕಾರ ಇದ್ದರೆ ಮನುಷ್ಯ ಒಂದಲ್ಲಾ ಒಂದು ದಿನ ಕೆಳಗೆ ಇಳಿಯಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.





