ಮೈಸೂರು: ಬಿಜೆಪಿ ನಾಯಕರು ಬರೀ ಸುಳ್ಳುಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಈ ಕುರಿತು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಸಭೆಗೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಬರಬೇಕಿತ್ತು. ಬಂದಿದ್ದರೆ ಏನೆಲ್ಲಾ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿವೆ ಎಂದು ಗೊತ್ತಾಗುತ್ತಿತ್ತು. ಮೈಸೂರಿನಲ್ಲಿ ಇವತ್ತು ಒಂದೇ 2578 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದರು.
ಇನ್ನು ಬಿಜೆಪಿಯವರೇ ನೀವು ಸುಳ್ಳು ಆರೋಪಗಳನ್ನು ಮಾಡುತ್ತೀರಿ. ನಿಮಗೆ ಸತ್ಯ ಗೊತ್ತಾಗಬೇಕಾದರೆ, ನೀವೆಲ್ಲರೂ ಒಂದೇ ವೇದಿಕೆಗೆ ಬರಬೇಕು. ಆ ವೇದಿಕೆಯಲ್ಲಿ ಎಲ್ಲಾ ಕುಳಿತು ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಹಣ ಇಲ್ಲದಿದ್ದರೆ ಇಂದು ಒಂದೇ ದಿನ 2578 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗುತ್ತಿರಲಿಲ್ಲ ಎಂದು ಹೇಳಿದರು.
ಇನ್ನು ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೆ ವಿನಹ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರಲಿಲ್ಲ. ಜೆಡಿಎಸ್ ವರ್ಷದಿಂದ ವರ್ಷಕ್ಕೆ ಶಾಸಕರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡು ಬರುತ್ತಿದೆ. ಸ್ವಂತ ಶಕ್ತಿ ಮೇಲೆ ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಿಂದ ನಾವು ಕೇಂದ್ರಕ್ಕೆ ಕೊಡುತ್ತಿರುವ ತೆರಿಗೆ ನಾಲ್ಕುವರೆ ಲಕ್ಷ ಕೋಟಿ ರೂಪಾಯಿ. ಆದರೆ ನಮಗೆ ಕೇಂದ್ರದಿಂದ ನಮ್ಮ ಪಾಲು ಬರುತ್ತಿರುವುದು ಕೇವಲ 65,000 ಕೋಟಿ ರೂಪಾಯಿ. ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಭಾರೀ ಅನ್ಯಾಯವಾಗುತ್ತಿದೆ. ಬಿಜೆಪಿ ನಾಯಕರಿಗೆ ನರೇಂದ್ರ ಮೋದಿ ಅವರ ಮುಂದೆ ನಿಂತುಕೊಳ್ಳಲು ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳನ್ನು ಒಂದು ಸಮುದಾಯಕ್ಕೆ ಕೊಟ್ಟಿಲ್ಲ. ಎಲ್ಲಾ ಸಮುದಾಯಕ್ಕೂ ನಾವು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಪ್ರಧಾನಿ ಮೋದಿ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಆರೋಪ ಮಾಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಗ್ಯಾರಂಟಿ ಯೋಜನೆ ಅತ್ಯಂತ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.





