Mysore
21
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಪ್ರಾಚ್ಯವಿದ್ಯಾ ಸಂಶೋಧನಾಲಯ ಉತ್ಕೃಷ್ಠ ಜ್ಞಾನ ಗ್ರಂಥಗಳನ್ನು ಪ್ರಕಟಿಸಲಿ : ಭಾರತೀ ಸ್ವಾಮೀಜಿ ಆಶಯ

ಮೈಸೂರು : ಸಂಸ್ಕೃತ ಗ್ರಂಥ, ಶಾಸ್ತ್ರ ಗ್ರಂಥ, ವೇದಾಂತ ವಿಚಾರದ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಜೀವನ ಸಾರ್ಥಕಗೊಳ್ಳಲಿದೆ ಎಂದು ಶೃಂಗೇರಿ ಶಾರದಾ ಪೀಠಾಧಿಶ್ವರ ಶ್ರೀವಿಧು ಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸೋಮವಾರ ನಡೆದ ಗುರುವಂದನಾ ಸಮಾರಂಭ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚೀನ ಕಾಲದ ಉತ್ತಮವಾದ ವಿದ್ಯೆಯ ವೈಶಿಷ್ಟ್ಯ, ಮಹಿಮೆಯನ್ನು ಪ್ರತಿಯೊಬ್ಬರೂ ಅರಿತುಕೊಂಡು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪ್ರಾಚೀನ ಕಾಲದಿಂದ ಬಂದಿರುವ ಅತ್ಯಂತ ಉತ್ಕೃಷ್ಟ ವಿಚಾರಗಳ ಜ್ಞಾನ ಧಾರೆಯಾದ ತಾಳೆಗರಿಗಳನ್ನು ಪ್ರಾಚ್ಯವಿದ್ಯಾ ಸಂಶೋಧನಾಲಯ ಸಂರಕ್ಷಣೆ ಮಾಡಿ ಸಂಶೋಧನೆ ನಡೆಸಿ ಅಪ್ರಕಟಿತ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದು, ಮುಂದೆಯೂ ಉತ್ಕೃಷ್ಟ ಜ್ಞಾನದ ಗ್ರಂಥಗಳು ಪ್ರಕಟಿಸಬೇಕು ಎಂದು ಹೇಳಿದರು.

ಸಂಸ್ಕೃತ ಗ್ರಂಥ, ಶಾಸ್ತ್ರ ಗ್ರಂಥ, ವೇದಾಂತ ವಿಚಾರದ ಗ್ರಂಥಗಳಲ್ಲಿ ಸಿಗುವ ಜ್ಞಾನದಿಂದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ಆದರೆ, ಹೆಚ್ಚಿನ ಜನರು ಲೌಕಿಕ ವಿಚಾರಗಳಿಂದ ಜೀವನವನ್ನು ಸಾರ್ಥ ಮಾಡಿಕೊಳ್ಳಬಹುದು ಎಂದು ಆಸಕ್ತಿ ಹೊಂದಿದ್ದಾರೆ. ಲೌಕಿಕ ವಿಚಾರಗಳನ್ನು ತಿಳಿದುಕೊಂಡರೆ ಸಾಕು ಎಂದು ಭ್ರಮಿಸಿದ್ದಾರೆ. ಶರೀರ ಹೊರ ಭಾಗ ಚೆನ್ನಾಗಿ ಅಲಂಕಾರ ಮಾಡಿಕೊಂಡರೆ ದೇಹ ಆರೋಗ್ಯವಾಗಿರುವುದಿಲ್ಲ. ಹೊರಗಿನ ಅಲಂಕಾರದಿಂದ ದೇಹ ಚಲಿಸುವುದಿಲ್ಲ. ದೇಹದೊಳಗಿನ ಹೃದಯವೂ ಆರೋಗ್ಯವಾಗಿದ್ದರೆ ನಮ್ಮ ಶರೀರ ಚೆನ್ನಾಗಿರಲಿದೆ. ಹೀಗಾಗಿ ಪ್ರಾಚೀನ ವಿದ್ಯೆ ಮನಸ್ಸಿನ ಆರೋಗ್ಯ ಕಾಯಲಿವೆ. ಪ್ರಾಚೀನ ಗ್ರಂಥಗಳ ಮಹಿಮೆ ತಿಳಿದುಕೊಳ್ಳುವುದು ಸಾಮಾನ್ಯವಿಚಾರವಲ್ಲ. ಜೀವನ ಸಾರ್ಥಕವಾದ ವಿಚಾರಗಳು ಈ ಗ್ರಂಥಗಳಲ್ಲಿವೆ ಎಂದರು.

ಇದನ್ನೂ ಓದಿ:-ಮೈಸೂರು | ಸೆಸ್ಕ್ ಕಚೇರಿಯಲ್ಲಿ ಮೇಲ್ದರ್ಜೆಗೇರಿಸಿದ ಇವಿ ಫಾಸ್ಟ್ ಚಾರ್ಜಿಂಗ್ ಘಟಕ ಉದ್ಘಾಟನೆ

ಹಿಂದಿನವರು ಆಧುನಿಕ ವ್ಯವಸ್ಥೆ ಇಲ್ಲದಿರುವ ಕಾಲದಲ್ಲಿ ಕಷ್ಟಪಟ್ಟು ತಾಳಪಾತ್ರಗಳನ್ನು ರಚಿಸಿ ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಸಿಗಬೇಕು ಎಂಬ ದೃಷ್ಟಿಯಿಂದ ಪರಂಪರೆಯ ವಿದ್ಯೆಯನ್ನು ಸಂರಕ್ಷಣೆ ಮಾಡಿಕೊಂಡು ಬರಲಾಗಿದೆ. ಇವುಗಳನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಪ್ರಾಚ್ಯವಿದ್ಯಾ ಸಂಶೋಧನಾಲಯ ಕಟ್ಟಡ ಹಳೆಯದು ಗ್ರಂಥಗಳು ಕೂಡ ಹಳೆಯದಾಗಿವೆ. ಇವುಗಳನ್ನು ನಿರ್ವಹಣೆ ಮಾಡಲು ವಿವಿಗೆ ಕಷ್ಟವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಶೃಂಗೇರಿ ಮಠದಿಂದ ಒಂದು ಕೋಟಿ ರೂ.ಹಣವನ್ನು ನೀಡಿ ನಿರ್ವಹಣೆಗೆ ನೆರವು ನೀಡಿರುವುದು ಡಿಜಿಟಲೀಕರಣಕ್ಕೆ ಅನುಕೂಲವಾಗಿದೆ. ಗುರುಗಳು ಆರ್ಶೀವಾದ ಮತ್ತು ದಾನಿಗಳ ಸಹಾಯಹಸ್ತದಿಂದ ಇನ್ನೂ ಅಭಿವೃದ್ಧಿಯಾಗಲಿದೆ. ಶೃಂಗೇರಿ ಮಠದಿಂದ ನಮಗೆ ಅನುದಾನ ಬಂದಿರುವುದು ಸಂತೋಷದ ಸಂಗತಿ. ಇದಕ್ಕೆ ವಿವಿಯೂ ಅಭಾರಿಯಾಗಿದೆ ಎಂದರು.

ವಿದ್ವಾನ್ ಹರಿಫಣಿ ರಾಜದತ್ತ ಮತ್ತು ತಂಡದವರು ವೇದಘೋಷ ಮಾಡಿದರು. ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ.ಮಧು ಸೂದನಾಚಾರ್ಯ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ವಿವಿ ಕುಲಸಚಿವರಾದ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!