ಮೈಸೂರು: ರಾಜ್ಯದಲ್ಲಿ ಈಗ ನಡೆದಿರುವ ಜಾತಿ ಗಣತಿ ಸಮೀಕ್ಷೆ ಅವೈಜ್ಞಾನಿಕ ಎಂದು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಿನಕಲ್ ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿಗಣತಿ ವರದಿ ಸಮೀಕ್ಷೆ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೀರಶೈವ ಜನಸಂಖ್ಯೆ ಸುಮಾರು ಒಂದೂವರೆಯಿಂದ ಎರಡು ಕೋಟಿ ಇದೆ. ರಾಜ್ಯದಲ್ಲಿ ನಾವೇ ನಿರ್ಣಾಯಕ. ನಾವು ಯಾವ ಕಡೆ ವಾಲುತ್ತೇವೆ ಅವರಿಗೆ ಅಧಿಕಾರ. ಈಗ ನಡೆಸಿರುವ ಜಾತಿ ಗಣತಿ ಸಮೀಕ್ಷೆ ಅವೈಜ್ಞಾನಿಕ. ನಮ್ಮ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪನವರು ಈಗಾಗಲೇ ಪ್ರತ್ಯೇಕ ಸಮೀಕ್ಷೆ ನಡೆಸುತ್ತೇವೆ ಎಂದಿದ್ದಾರೆ.
ಅವರ ನಿಲುವಿಗೆ ನಾವು ಬದ್ಧ. ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ರೀತಿ ನಿರ್ಧಾರಕ್ಕೆ ಕೈ ಹಾಕಿದ್ದಾರೆ. ಇದು ವೈಜ್ಞಾನಿಕ ಸಮೀಕ್ಷೆ ಅಲ್ಲ ಸರ್ಕಾರದ ಈ ಜಾತಿ ಬಿಡುಗಡೆ ವರದಿಯ ದುಸ್ಸಾಹಕ್ಕೆ ಕೈಹಾಕುವುದನ್ನ ಬಿಡಬೇಕು.
ಇಲ್ಲ ಅಂದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.





