ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ರಾಜ್ಯದಲ್ಲಿ ಪಗಡೆಯಾಟ ಅಂದುಕೊಂಡಿದ್ದು, ರಾಜಕೀಯ ದಾಳ ಅಸ್ತ್ರವನ್ನಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.17) ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುವಾಗ ಮಾತ್ರ ಜಾತಿಗಣತಿ ವರದಿ ನೆನಪಿಗೆ ಬರುತ್ತದೆ. ಅಲ್ಲದೇ ಈ ವರದಿಯೂ ಅವೈಜ್ಞಾನಿಕವಾಗಿದ್ದು, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ವಿರೋಧವಿದೆ ಎಂದರು.
ರಾಜ್ಯದಲ್ಲಿ ಜಾತಿಗಣತಿ ವರದಿ ಸೋರಿಕೆಯಾಗಿದ್ದು, ಗಣತಿ ಸರಿಯಾಗಿ ನಡೆದಿಲ್ಲ. ರಾಜ್ಯದಲ್ಲಿ ಎಲ್ಲ ಸಮುದಾಯವದರಿಗೆ ನ್ಯಾಯ ನೀಡುವುದಕ್ಕೆ ಬೆಂಬಲವಿದೆ. ಆದರೆ ಕೇವಲ ರಾಜಕೀಯಕ್ಕಾಗಿ ಜಾತಿಗಣತಿಯನ್ನಿಟ್ಟುಕೊಂಡು ಆಟವಾಡಬಾರದು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ
ನಮ್ಮ ಪಕ್ಷದಲ್ಲಿ ಎಲ್ಲಾ ಗೊಂದಲಗಳು ಬೇಗನೆ ಬಗೆಹರಿಯಲಿದ್ದು, ಕೆಲವೇ ದಿನಗಳಲ್ಲಿ ಭಿನ್ನಮತೀಯರ ಮಾತುಗಳು ಸಹ ನಿಲ್ಲುತ್ತವೆ. ಮುಂದಿನ ದಿನಗಳಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿಕೊಂಡು ಹೋಗುತ್ತೇನೆ. ಹೀಗಾಗಿ ಬಿಜೆಪಿ ಪಕ್ಷದಲ್ಲಿ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೇನೆ ಎಂದು ತಿಳಿಸಿದರು.