ಮೈಸೂರು: ಕೋರ್ಟ್ ದಯೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಬದುಕಿದ್ದಾರೆ. 82 ವರ್ಷ ವಯಸ್ಸಾದರೂ ಅವರಿಗೆ ಇದು ಬೇಕಿತ್ತಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಅವರು ಜೈಲು ಸೇರಬೇಕಿತ್ತು ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ. 82ನೇ ವಯಸ್ಸಿನಲ್ಲಿ ಅವರಿಗೆ ಇದು ಬೇಕಿತ್ತಾ.? ಒಂದು ಚಿಕ್ಕ ಹೆಣ್ಣು ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ ಎಂದು ಬಿಎಸ್‌ವೈ ವಿರುದ್ಧ ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಯಡಿಯೂರಪ್ಪಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಶುಕ್ರವಾರ ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶ ಇದೆ. ಸಮಾವೇಶದಲ್ಲಿ ಬಿಜೆಪಿ ಸರ್ಕಾರದ ಎಲ್ಲಾ ಹಗರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಯಡಿಯೂರಪ್ಪ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಇನ್ನು ನಮ್ಮ ಸರ್ಕಾರ ಬಡವರ ಪರ ಇದೆ ಎಂಬುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಸರ್ಕಾರಕ್ಕೆ ಅವರು ಏನೂ ಮಾಡಲು ಆಗಲ್ಲ ಎಂದು ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬಗ್ಗೆ ಕಿಡಿಕಾರಿದರು.