ಮೈಸೂರು: ಮುಡಾ ಮಾಜಿ ಆಯುಕ್ತ ಟಿ.ಬಿ.ನಟೇಶ್ ವಿಚಾರಣೆಗೆ ಗೃಹ ಇಲಾಖೆ ಅನುಮತಿ ನೀಡಿದ್ದು, ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ ನೀಡುವ ಸಾಧ್ಯತೆ ಇದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಯನ್ನು ವಿಚಾರಣೆ ಮಾಡಲು 17ಎ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಕೋರಿ ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕರಿಸಿದ ಗೃಹ ಇಲಾಖೆ ಅನುಮತಿ ನೀಡಿ ವಿಚಾರಣೆ ಒಳಪಡಿಸುವಂತೆ ತಿಳಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ನಟೇಶ್‌ರಿಗೆ ಮುಂದಿನ ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಅವರು ಮುಡಾ ಪ್ರಕರಣದಲ್ಲಿ ನಿವೇಶನ ಮರು ಹಂಚಿಕೆ ವಿಚಾರವಾಗಿ ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದರು. ಅಲ್ಲದೇ ಇ.ಡಿ ತನಿಖಾ ಸಂಸ್ಥೆ ಮುಂದೆ ಮೂರು ಬಾರಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದರು.
ಈಗ ಮುಂದಿನ ವಾರ ಲೋಕಾಯುಕ್ತ ನೋಟಿಸ್ ನೀಡುವ ಎಲ್ಲಾ ಸಾಧ್ಯತೆಯಿದ್ದು, ನಟೇಶ್ ಎದೆಯಲ್ಲಿ ಢವ ಢವ ಶುರುವಾಗಿದೆ.