ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶೇಷ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಕುರಿತಾಗಿದ್ದು, ಎರಡೂ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಡನೆ ಒಡಂಬಡಿಕೆ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಬಹಳ ವಿಶಿಷ್ಟವಾಗಿದ್ದು, ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಅವರ ಕುರಿತಾದ ಕಾನೂನುಗಳು ಹಾಗೂ ಅವರಿಗೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿ ಗಳು ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ.
ಈ ಒಡಂಬಡಿಕೆಯ ಮೂಲಕ ಪ್ರಸ್ತುತ ಸಮಾಜದಲ್ಲಿ ಮಹಿಳೆ ಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ದೌರ್ಜನ್ಯಮುಕ್ತ ಸಮಾಜ ನಿರ್ಮಾಣವಾಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಇದನ್ನು ಓದಿ: ಮೈಸೂರಲ್ಲಿ ಎಸ್.ಎಲ್.ಬೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ
ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ.ಜೆ.ಫಿಲಿಪ್ಸ್ ಅವರು, ಕರ್ನಾ ಟಕ ಪೊಲೀಸ್ ಅಕಾಡೆಮಿಯೊಡನೆ ಒಡಂಬಡಿಕೆ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯ ವಾಗಿ ಕಡಿಮೆ ಮಾಡುವುದಲ್ಲದೇ, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಯೊಂದಿಗೆ ಕೈಜೋಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಇಂತಹ ಆಲೋಚನೆಗೆ ಈ ಸಂಸ್ಥೆಯ ನಿರ್ದೇಶಕ ಚೆನ್ನಬಸವಣ್ಣ ಅವರು ಹಾಗೂ ಎಲ್ಲಾ ಅಽಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.
ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಲೋಕೇಶ್, ಕರ್ನಾಟಕ ಪೊಲೀಸ್ ಅಕಾಡೆಮಿಯ ಅಽಕಾರಿ ವರ್ಗ ಹಾಗೂ ಬೋಧಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.





