Mysore
25
overcast clouds
Light
Dark

ಪ್ರಧಾನಿ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಟಲಿ ಪ್ರಧಾನಿ

ದುಬೈ : 28ನೇ ಹವಾಮಾನ ಶೃಂಗಸಭೆ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, COP28 ನಲ್ಲಿ ಉತ್ತಮ ಸ್ನೇಹಿತರು ಎಂಬ ಟೈಟಲ್‌ ನೀಡಿದ್ದಾರೆ.

ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿಯೂ ಇಟಲಿ ಪ್ರಧಾನಿ ಜಾರ್ಜಿಯಾ ಅವರು ಮೋದಿ ಅವರೊಂದಿಗೆ ಸ್ನೇಹಿತರಂತೆ ವರ್ತಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದೀಗ ಅವರು ಪ್ರಧಾನಿ ಮೋದಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು, ಎರಡು ದೇಶಗಳ ನಡುವಿನ ನಿಕಟತೆ ಕಾಣಿಸುತ್ತಿದೆ.

#ಮೆಲೋಡಿ ಎಂಬ ಹ್ಯಾಸ್‌ಟ್ಯಾಗ್‌ ಮೂಲಕ ಪೋಸ್ಟ್‌ ಮಾಡಿದ್ದು, ಉಭಯ ನಾಯಕರ ನಡುವಿನ ಬಾಂದವ್ಯವನ್ನು ತೋರಿಸುತ್ತದೆ. ಇದು ಸಮೃದ್ಧ ಮತ್ತು ಸುಸ್ಥಿರ ಅಭಿವೃದ್ಧಿಯ ದೃಷ್ಠಿಯಿಂದ ಎರಡು ದೇಶಗಳ ಸಹಯೋಗ ಕಾಣುತ್ತಿದೆ ಎಂದು ಸಾರಿದ್ದಾರೆ.

“#COP28 ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದೆನು. ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತ ಮತ್ತು ಇಟಲಿ ನಡುವಿನ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಪಿಎಂ ಮೋದಿ ತಮ್ಮ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಯುಎನ್‌ ಹವಾಮಾನ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪರಿಸರ ಸುಸ್ಥಿರತೆ, ಜಾಗತಿಕ ಇಂಗಾಳ ಹೊರಸೂಸುವಿಕೆ ಇತ್ಯಾದಿ ಗುರಿಗಳನ್ನು ಸಾದಿಸುವಲ್ಲಿ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು. ಹೆಚ್ಚುವರಿಯಾಗಿ, ಕಾರ್ಬನ್ ಸಿಂಕ್‌ಗಳನ್ನು ರಚಿಸುವಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪಿಎಂ ಮೋದಿ “ಗ್ರೀನ್ ಕ್ರೆಡಿಟ್” ಉಪಕ್ರಮವನ್ನು ಪರಿಚಯಿಸಿದರು.

ಯುಎಇಯ ಅಧ್ಯಕ್ಷತೆಯಲ್ಲಿ ನಡೆದ COP28 ಶೃಂಗಸಭೆಯು ಜಾಗತಿಕ ಹವಾಮಾನ ಕ್ರಿಯೆಯ ಮೇಲೆ ಕೇಂದ್ರೀಕರಿಸಿತು. ವಿವಿಧ ನಾಯಕರೊಂದಿಗೆ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಗಳನ್ನು ಚರ್ಚಿಸುವಾಗ ಸ್ವಚ್ಛ ಮತ್ತು ಹಸಿರು ಬೆಳವಣಿಗೆಯನ್ನು ಉತ್ತೇಜಿಸಲಾಯಿತು. ಹವಾಮಾನ ಗುರಿಗಳನ್ನು ಸಾಧಿಸಲು ಭಾರತದ ಬದ್ಧತೆಯನ್ನು ಮತ್ತು ಸುಸ್ಥಿರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಐತಿಹಾಸಿಕ ತಪ್ಪುಗಳನ್ನು ಪರಿಹರಿಸುವ ಕುರಿತು ಪ್ರಧಾನಿ ಮೋದಿಯವರು ಒತ್ತಿ ಹೇಳಿದರು.

ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟರ್ಕಿ ಅಧ್ಯಕ್ಷ ಆರ್‌ಟಿ ಎರ್ಡೋಗನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಭಾಗವಹಿಸಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ