ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ವಿಶ್ವದ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿದೆ.
ಯುನೆಸ್ಕೋದ ಪ್ರಿಕ್ಸ್ ವೆರ್ಸೆಲೈಸ್, ʼವಿಶ್ವ ಶ್ರೇಷ್ಠ ಒಳಾಂಗಣಕ್ಕೆ ವಿಶೇಷ ಬಹುಮಾನ-2023ʼ ನೀಡಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಗುರುವಾರ ತಿಳಿಸಿದೆ.
ಇಂಥ ಗೌರವಕ್ಕೆ ಪಾತ್ರವಾದ ದೇಶದ ಏಕೈಕ ವಿಮಾನ ನಿಲ್ದಾಣವೂ ಇದೇ ಆಗಿದೆ.
2,55,661 ಚದರ ಮೀಟರ್ ವಿಸ್ತೀರ್ಣದ ಈ ಟರ್ಮಿನಲ್‌ನಲ್ಲಿ, ತೂಗುವ ಉದ್ಯಾನ ಹಾಗೂ ಹೊರಾಂಗಣ ಉದ್ಯಾನ ಇದೆ. ಇದರಲ್ಲಿ ಪ್ರಯಾಣಿಕರು ನಡೆದಾಡಬಹುದು ಕೂಡ. ಇಡೀ ಏರ್‌ಪೋರ್ಟ್‌ನಲ್ಲಿ ಮರುಬಳಕೆ ಮಾಡಬಹುದಾದ ಇಂಧನವನ್ನು ಬಳಸಲಾಗಿದೆ.
ಟರ್ಮಿನಲ್-2ರ ಮೊದಲ ಹಂತವನ್ನು 2022ರ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದರು. ವಾರ್ಷಿಕವಾಗಿ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.