ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇಬ್ಬರ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಭಾರತದ ಚಿತ್ರರಂಗಕ್ಕೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್ ನಟಿ ನುಶ್ರತ್ ಭರುಚಾ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಯಹೂದಿಗಳ ದೇಶವಾದ ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ದಾಳಿ ನಡೆಸಿದ್ದು, ಇಸ್ರೇಲ್ ಕೂಡ ಯುದ್ಧ ಸಾರಿದೆ. ಹಮಾಸ್ ಉಗ್ರರು ನಡೆಸಿದ 5 ಸಾವಿರಕ್ಕೂ ಅಧಿಕ ರಾಕೆಟ್‌ಗಳ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಇದುವರೆಗೆ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಟೆಲ್‌ಅವಿವ್ ನಗರವಂತೂ ಅಕ್ಷರಶಃ ಮಸಣದಂತಾಗಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನುಶ್ರತ್ ಭರುಚ್ಚಾ ಅವರು ಹೈಫಾ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದರು. ಶನಿವಾರ ಮಧ್ಯಾಹ್ನ 12.30ಕ್ಕೆ ನಾವು ಅವರ ಜತೆ ಮಾತನಾಡಿದ್ದೆವು. ಆದರೆ, ಉಗ್ರರ ದಾಳಿಯ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಫೋನ್‌ಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ.
ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಅವರು ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನಿಸುತ್ತಿದೆ. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಯತ್ನಿಸಲಾಗುತ್ತಿದೆ” ಎಂದು ನಟಿಯ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ನುಸ್ರತ್ ಭರುಚ್ಚಾ ಅವರು ಡ್ರೀಮ್ ಗರ್ಲ್, ಅಕೇಲಿ, ಸೆಲ್ಫಿ, ಜನ್ ಹಿತ್ ಮೇ ಜಾರಿ ಸೇರಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.