ಬೆಂಗಳೂರು: ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಒಬ್ಬ ಬಾಣಂತಿ ಹಾಗೂ ಅವಳಿ ಶಿಶುಗಳು ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ತುರ್ತು ಚಿಕಿತ್ಸೆ ಸಂದರ್ಭಗಳಲ್ಲಿ ರೋಗಿಯಿಂದ ಅಥವಾ ಅಸ್ವಸ್ಥರಾದವರಿಂದ ಯಾವುದೇ ದಾಖಲೆಗಳನ್ನು ಕೇಳುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಈ ನಿಯಮ ಉಲ್ಲಂಘಿಸುವ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವುದಾಗಿ ರಾಜ್ಯ ಸರ್ಕಾರ ಎಚ್ಚರಿಸಿದೆ.
ಈ ಕುರಿತಂತೆ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ಆಸ್ಪತ್ರೆಗಳಿಗೆ, ಸರ್ಕಾರಿ ಅಧೀನ ಪ್ರಾಥಮಿಕ ಆರೋಗ್ಯಗಳಿಗೆ ಅನ್ವಯವಾಗುವಂತೆ ಆದೇಶಿಸಲಾಗಿದೆ. ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ದಾಗ ರೋಗಿ ಅಥವಾ ಅಸ್ವಸ್ಥರಾದವರಿಂದ ಸರ್ಕಾರಿ ದಾಖಲೆಗಳನ್ನು ಹಾಜರುಪಡಿಸುವಂತೆ ಬಲವಂತ ಮಾಡುವುದು ಅಥವಾ ಅದೇ ನೆಪದಲ್ಲಿ ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸಿದರೆ ಅಂಥ ವೈದ್ಯರುಮತ್ತು ಶುಶ್ರೂಷಕರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಾಣಂತಿ, ಅವಳಿ ಶಿಶುಗಳ ಮರಣ ಪ್ರಕರಣ: ಜಿಲ್ಲಾಸ್ಪತ್ರೆಯ ಸಿಬ್ಬಂದಿ ಅಮಾನತು
ಇದೇ ವೇಳೆ, ತುಮಕೂರಿನಲ್ಲಿ ಬಾಣಂತಿ ಸಾವಿಗೆ ಕಾರಣವಾಗಿರುವ ವೈದ್ಯರು ಹಾಗೂ ಶುಶ್ರೂಷಕರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕರ್ತವ್ಯ ಲೋಪ ಹಾಗೂ ದುರ್ನಡತೆ ಆರೋಪದಡಿ ಜಾರಿಗೆ ಬರುವಂತೆ ಈ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ತಮಿಳುನಾಡು ಮೂಲದ ಕಸ್ತೂರಿ ಎಂಬ ಮಹಿಳೆಯ ಗಂಡ ಎರಡು ತಿಂಗಳ ಹಿಂದಷ್ಟೇ ತೀರಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ತನ್ನ ಏಳು ವರ್ಷದ ಮಗಳೊಂದಿಗೆ ಆಕೆ ತುಮಕೂರು ನಗರಕ್ಕೆ ಬಂದು ನೆಲೆಸಿದ್ದರು. ತುಂಬು ಗರ್ಭಿಣಿಯಾಗಿದ್ದ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ, ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆದರೆ, ವೈದ್ಯರು ಮಹಿಳೆಯ ಆಧಾರ್ ಕಾರ್ಡ್, ತಾಯಿ ಇಲ್ಲವೆಂದು ಚಿಕಿತ್ಸೆ ನಿರಾಕರಿಸಿದ್ದರು.
ತೀವ್ರವಾಗಿ ಅಂಗಲಾಚಿ ಬೇಡಿದ್ದಕ್ಕೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುವುದಾಗಿ ಹೇಳಿ ಅಲ್ಲಿಯೇ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರು. ಆದರೆ, ಮಹಿಳೆಯ ಬಳಿ ಹಣವಿಲ್ಲದ್ದಕ್ಕೆ ಆಕೆ ಮನೆಗೆ ಹಿಂದಿರುಗಿದ್ದರು. ಆದರೆ, ಅದರ ಬೆನ್ನಲ್ಲೇ ಆಕೆಗೆ ಹೆರಿಗೆಯಾಗಿತ್ತು. ಅವಳಿ ಮಕ್ಕಳು ಜನಿಸಿದ್ದವು. ಎರಡನೇ ಮಗು ಜನನವಾಗುವಾಗ ಮಹಿಳೆ ಮೃತಪಟ್ಟಿದ್ದರು. ಅದರ ಹಿಂದೆಯೇ ಆ ಎರಡೂ ಮಕ್ಕಳು ಮೃತಪಟ್ಟಿದ್ದವು.