Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸಂಗೀತದ ಜೊತೆಗೆ ತುಂಬೆ ಹೂವಿನ ಮಾಲೆ

ಹೂ ಕಟ್ಟುವ ಸ್ಪರ್ಧೆಗಳಲ್ಲಿ ಸುಲೋಚನ ಅವರ ಮಾಲೆ ಇತ್ತೆಂದರೆ ಬಹುಮಾನ ಖಚಿತ

• ಅಭಿಜಿತ್

ಕಿರಿಯರ ಜೊತೆಗೆ ಸಮಯ ಕಳೆಯುತ್ತಾ, ಓದು-ಭಕ್ತಿಯೊಂದಿಗೆ ಜೀವನ ಸಾಗಿಸುತ್ತಿರುವವರು ಶ್ರೀಮತಿ ಸುಲೋಚನ ಪ್ರಸನ್ನ ಅವರು. ಶಾಸ್ತ್ರೀಯ ಸಂಗೀತ, ಗಮಕ ವಾಚನ, ವಚನ ಗಾಯನ, ಜಾನಪದ ಗೀತೆ, ಕೀರ್ತನೆ ಹೀಗೆ ಎಲ್ಲ ಪ್ರಕಾರಗಳ ಸಂಗೀತಕ್ಕೂ ತಾವು ಸೈ ಎನ್ನುತ್ತಾರೆ. ಹೂಮಾಲೆ ಕಟ್ಟುವುದು, ಭಗವಂತನಿಗೆ ಅರ್ಪಿಸುವುದು, ಪುಸ್ತಕಗಳನ್ನು ಮಗುವಿನಂತೆ ಜೋಪಾನ ಮಾಡುವುದು, ಬಿಡುವಿನ ವೇಳೆಯನ್ನು ಓದುತ್ತಾ, ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದು ಇವರ ಬದುಕಿನ ಭಾಗವೇ ಆಗಿದೆ.

ಮನೆಯಲ್ಲಿ ಸ್ಥಿತಿವಂತರಾಗಿದ್ದರಿಂದ ಇವರ ಶಿಕ್ಷಣಕ್ಕೆ ಪ್ರಾಶಸ್ಯ ದೊರೆಯಿತು. ಪಿಯುಸಿ ಓದಿನ ಬಳಿಕ ಮುಂದೇನು ಮಾಡುವುದೆಂದು ಯೋಚಿಸುತ್ತಿ ರುವಾಗ ಗಂಗೋತ್ರಿಯ ಲಲಿತ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಓದುತ್ತಿರುವಾಗ ಮನೆಯವರು ಪ್ರಸನ್ನ ಅವರೊಂದಿಗೆ ಮದುವೆ ಮಾಡಿ, ಕಳುಹಿಕೊಟ್ಟರು. ಕೆ.ಆರ್.ನಗರದಲ್ಲಿ ಹುಟ್ಟಿದ್ದಾದರೂ ಮದುವೆಯಾಗಿ ಹೋಗಿದ್ದು ಕೊಡಗಿಗೆ ಕೊಡಗು ಎಂದರೆ ಸುಲೋಚನ ಅವರಿಗೆ ಬರಿಯ ಊರಲ್ಲ, ಹೊಸ ಬದುಕನ್ನು ಕೊಟ್ಟ ತಾಣ.

ಮಗಳು ಮೂರನೇ ತರಗತಿಯಲ್ಲಿದ್ದಾಗ, ಓದಬೇಕೆಂಬ ಆಸೆ ಮತ್ತೆ ಮೊಳಕೆಯೊಡೆಯಿತು. ಆದದ್ದಾಗಲಿ ಎಂದು ಟಿಸಿಎಚ್‌ಗೆ ಸೇರಲು ಹೊರಟರು. ಕಾಲೇಜಿಗೆ ಹೋಗಿ ವಿಚಾರಿಸಿದರೆ, ಅಂಕಪಟ್ಟಿಯೊಂದನ್ನು ತರಬೇಕೆಂದರು. ಮುಂದಿನ ಬಾರಿ ತಂದೊಪ್ಪಿಸುತ್ತೇನೆಂದು
ಹೇಳಿ ಇವರು ವಾಪಸಾದರು. ಮನೆಗೆ ಬಂದ ಮೇಲೆ ಮಗಳು, “ಅಪ್ಪ ನನ್ನನ್ನ ಕಾರಲ್ಲಿ
ಕೂರಿಸ್ಕೊಂಡು, ಶಾಲೆಗೆ ಬಿಟ್ಟು, ಬಾಯ್ ಮಗ್ಗೇ ಅಂತ ಹೇಳೇಕು
ಎಂದಿದ್ದಷ್ಟೇ, ಶಾಲೆಯಲ್ಲಿ ಶಿಕಕಿಯಾದ ಮೇಲೆ ಉಳಿದ ಮಕ್ಕಳು ತನ್ನನು ಕಂಗಾಲಾಗಿಸುತ್ತಾರೆ ಎಂಬ ಭಯದ ಕಾರಣಕ್ಕೆ ಓದುವ ಕನಸು ಮತ್ತೆ ಕಮರಿತು.

ಗಂಡನ ಮನೆಯ ಕಡೆಯಿಂದ ಬಹಳಷ್ಟು ಅವಕಾಶಗಳು ಇವರನ್ನರಸಿ ಬಂದವು. ಅದುವರೆಗೂ ಭಕ್ತಿಗೀತೆಗಳಿಗೆ ದನಿಯಾಗುತ್ತಿದ್ದ ಸುಲೋಚನ ಅವರು, ಪ್ರಸನ್ನ ಅವರ ಭಾವರಾದಂತಹ ಹೆಡ್ ಮಾಸ್ಟರ್ ಕಲ್ಯಾಣಪ್ಪ ಅವರ ಶಾಲೆಗೆ ಹೋಗಿ ವಾರ್ಷಿಕೋತ್ಸವಕ್ಕಾಗಿ ಮಕ್ಕಳಿಗೆ ಹಾಡು, ಅಭಿನಯ ಗೀತೆಗಳನ್ನು ಕಲಿಸುತ್ತಿದ್ದರು. ಪಠ್ಯ ಬೋಧಿಸದಿದ್ದರೂ ವರ್ಷಕ್ಕೊಮ್ಮೆ ಸಂಗೀತ ಕಲಿಸುವ ಶಿಕ್ಷಕಿಯಾಗಿದ್ದೇ ಸುಲೋಚನೆ ಅವರ ಹೆಮ್ಮೆ.

ಸೋಮವಾರಪೇಟೆಯಲ್ಲಿ ಅಕ್ಕನ ಬಳಗ ಬಸವ ಕೇಂದ್ರ ಸ್ಥಾಪನೆಯಾದ ಮೇಲೆ ಅನೇಕ ಪ್ರವಚನಗಳು ನಡೆಯುತ್ತಿದ್ದವು. ಆಗೆಲ್ಲ ಇವರಿಗೂ ಶರಣರ ವಿಷಯದ ಕುರಿತು ಮಾತನಾಡಬೇಕೆಂದು ಅನಿಸುತ್ತಿತ್ತು. ಒಮ್ಮೆ ಪ್ರವಚನಕಾರರು ಬರದೇ ಇದ್ದಾಗ, ಸುಲೋಚನ ಅವರೇ ತಾವು ಓದಿದ್ದ ಪುಸ್ತಕಗಳಿಂದ ಆಯ್ದ ವಿಚಾರಗಳನ್ನು ಸೇರಿಸಿ ಪ್ರಬಂಧ ಮಂಡಿಸಿದ್ದರು.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪೂರ್ತಿ ಅಭ್ಯಾಸ ಮಾಡದ ಕಾರಣಕ್ಕೆ ಮಗಳಾದರೂ ಸಂಗೀತ ಕಲಿಯಲೆಂಬ ಇಂಗಿತದಿಂದ, ತರಗತಿಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಓದಿನ ಬಗ್ಗೆ ಆಸಕ್ತಿ ಇದ್ದ ಕಾರಣ ಮಗಳು ಸಂಗೀತ ಅಭ್ಯಾಸ ನಿಲ್ಲಿಸುವಂತಾಯಿತು. ಇದಾಗಿ ಹದಿನೇಳು ವರ್ಷ ಆದ ಮೇಲೆ ಮೈಸೂರಿಗೆ ಹೊರಟಿದ್ದರು. ಸುಲೋಚನ ಅವರಿಗೆ ಈಗಲಾದರೂ ತಾನು ಸಂಗೀತ ಕಲಿಯಬಹುದೆಂದು ಅನಿಸಿತು. ಅಷ್ಟು ಹೊತ್ತಿಗೆ ಮಗಳು ಮತ್ತೆ ಸಂಗೀತ ಕಲಿಯುತ್ತೇನೆಂದು ಹೇಳಿದಾಗ, ಖುಷಿಗೊಂಡು ಸೇರಿಸಿದರು. ಈಗಲೂ ಕಲಿಯುವ ಆಸಕ್ತಿ ಇದೆ ಎನ್ನುತ್ತಾ ಹಾಡನ್ನು ಗುನುಗುವ ಸುಲೋಚನ ಅವರ ಸಂಗೀತ ಪ್ರೀತಿಗೆ ಬೆರಗಾಗಲೇ ಬೇಕು.

ಶರಣರ ಪುಸ್ತಕಗಳನ್ನು ಓದುತ್ತಿರುವಾಗ, ‘ಅ’ ಅಕ್ಷರದಿಂದ ಆರಂಭವಾಗಿ ‘ಕ್ಷ’ ಅಕ್ಷರದವರೆಗೆ ಒಟ್ಟು ಸೇರಿಸಬೇಕೆನಿಸಿತು. ಸುಲಭ ಕೆಲಸವಂತೂ ಆಗಿರಲಿಲ್ಲ. ‘ಣ’ ಅಕ್ಷರವೊಂದಕ್ಕೇ ಅನೇಕರಲ್ಲಿ ಕೇಳಿ, ಬೇಸತ್ತ ಘಟನೆಗಳೂ ಇವೆ. ಹುಡುಕುತ್ತಿರುವಾಗ ಶಿವನ ಢಮರಿಂದ ಬರುವ ನಾದವೆಂದು ಪುಸ್ತಕದ ಸಹಾಯದಿಂದ ತಿಳಿಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳನ್ನು ಈ ಕೃತಿಯ ಸಲುವಾಗಿ ಮೀಸಲಿಟ್ಟರು. 2021 ರಲ್ಲಿ ಅಕ್ಷರದ ಶರಣರು’ ಕೃತಿಯಾಗಿ ಪ್ರಕಟವಾಯಿತು. ಸುಲೋಚನ ಅವರ ಇನ್ನೊಂದು ವಿಶೇಷವೆಂದರೆ ತುಂಬೆ ಹೂವಿನಲ್ಲಿ ಕಟ್ಟುವ ಮಾಲೆ. ಒಂದು ತುಂಬೆ ಮಾಲೆಯನ್ನು ಮಾಡುವುದಕ್ಕೆ ಒಂದು ಗಂಟೆಯಷ್ಟಾದರೂ ತುಂಬೆ ಹೂವನ್ನು ಆರಿಸಬೇಕು. ಹೂ ಕಟ್ಟುವ ಸ್ಪರ್ಧೆಗಳಲ್ಲಿ ಸುಲೋಚನ ಅವರ ಮಾಲೆ ಇತ್ತೆಂದರೆ ಬಹುಮಾನ ಖಾಯಂ. ಇದೆಲ್ಲ ಆಸಕ್ತಿಯ ನಡುವೆ ಆತ್ಮ ಪ್ರೀತಿ, ಭಗವಂತನ ಶಕ್ತಿಯೇ ನನ್ನನ್ನು ಕಾಯುತ್ತಿದ್ದೆ ಎಂದು ಅವರು ತೃಪ್ತರಾಗುತ್ತಾರೆ.

ಹಿರಿಯರಿಗಿರುವ ಕಾನೂನುಗಳು
ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ 2007, ಅಥವಾ ಹಿರಿಯ ನಾಗರಿಕರ ಸಂರಕ್ಷಣಾ ಕಾಯಿದೆಯು ವಯಸ್ಸಾದವರಿಗೆ ಆಹಾರ, ಬಟ್ಟೆ, ನಿವಾಸ ಮತ್ತು ವೈದ್ಯಕೀಯ ಆರೈಕೆಯಂತಹ ಜೀವನದ ಅಗತ್ಯಗಳನ್ನು ನೀಡಬೇಕು ಎಂಬುದನ್ನು ಖಾತರಿಪಡಿಸುತ್ತದೆ.

ಕಾಯಿದೆಯು ಮಕ್ಕಳು ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಬಯಸುತ್ತದೆ. ಪೋಷಕರಿಂದ ಸ್ಥಿರ ಅಥವಾ ಚರ ಆಸ್ತಿಯನ್ನು ಸ್ವೀಕರಿಸುವ ಮಕ್ಕಳು ಅಥವಾ ಸಂಬಂಧಿಕರು ತಮ್ಮ ಕುಟುಂಬದ ಹಿರಿಯ ಸದಸ್ಯರಿಗೆ ಸಾಕಷ್ಟು ಕಾಳಜಿಯನ್ನು ನೀಡದಿದ್ದರೆ ಅಮಾನ್ಯವೆಂದು ಪರಿಗಣಿಸಬಹುದು. ಮಕ್ಕಳು ಅಥವಾ ಸಂಬಂಧಿಕರು ಸಾಮಾನ್ಯ ‘ವಾಸ ಯೋಗ್ಯ ಜೀವನ’ ದ ಗುಣಮಟ್ಟವನ್ನು ತಮ್ಮ ಪೋಷಕರಿಗೆ ನೀಡಿಲ್ಲದಿದ್ದರೆ, ನ್ಯಾಯಮಂಡಳಿಯು ಮಕ್ಕಳು ಮತ್ತು ಸಂಬಂಧಿಕರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಅವರ ಹೆಸರಿಗೆ ವರ್ಗವಾದ ಆಸ್ತಿಯನ್ನು
ತಡೆಹಿಡಿಯಬಹುದು.

ಮಕ್ಕಳು ಅಥವಾ ಸಂಬಂಧಿಕರು ಸರಿಯಾದ ಆರೈಕೆಯನ್ನು ನೀಡದಿದ್ದರೆ ಅಥವಾ ಅವರನ್ನು ತ್ಯಜಿಸಿದರೆ, ಅದು ಈ ಕಾಯಿದೆಯ ಉಲ್ಲಂಘನೆ ಯಾಗುತ್ತದೆ. ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರೂ.ಗಳ ದಂಡ ಅಥವಾ ಎರಡನ್ನೂ ಶಿಕ್ಷೆಯಲ್ಲಿ ವಿಧಿಸಬಹುದು. ಪೋಷಕರಿಗೆ ಪೋಷಣೆ ನೀಡಲು ವಿಫಲವಾದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು

Tags: