Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಡಿಸೆಂಬರ್ ತಿಂಗಳಲ್ಲಿ ರಾವಣ ಆಗ್ತಾರೆ ಯಶ್‍; ‘ರಾಮಾಯಣ’ಕ್ಕೆ ಚಿತ್ರೀಕರಣ

ಬಾಲಿವುಡ್‍ನಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿ ವೆಚ್ಚದ ‘ರಾಮಾಯಣ’ ಚಿತ್ರದಲ್ಲಿ ಯಶ್‍ ಬರೀ ರಾವಣನಾಗಿ ನಟಿಸುತ್ತಿರುವುದಷ್ಟೇ ಅಲ್ಲ, ಆ ಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಳ್ಳುತ್ತಿರುವ ವಿಷಯ ಗೊತ್ತೇ ಇತ್ತು. ಈ ಕುರಿತು ಯಶ್‍ ಕೆಲವು ತಿಂಗಳುಗಳ ಹಿಂದೆ ಅಧಿಕೃತವಾಗಿ ಘೋಷಿಸಿದ್ದರು. ಈಗ ಅವರು ಡಿಸೆಂಬರ್‍ ತಿಂಗಳಿನಿಂದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗಲಿದ್ದು, ಈ ಪೈಕಿ ಮೊದಲನೆಯ ಭಾಗದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮೂಲಗಳ ಪ್ರಕಾರ, ಮೊದಲ ಭಾಗದ ಚಿತ್ರಕ್ಕೆ ರಣಬೀರ್‍ ಕಪೂರ್ ‍ಬಹುತೇಕ ಚಿತ್ರೀಕರಣ ಮುಗಿಸಿದ್ದಾರಂತೆ. ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಮುಗಿಸಿ, ಅಕ್ಟೋಬರ್‍ನಲ್ಲಿ ಸಂಜಯ್‍ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್‍ ವಾರ್‍’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ಇನ್ನು, ಯಶ್‍ ಈ ವರ್ಷದ ಡಿಸೆಂಬರ್‍ನಲ್ಲಿ ಚಿತ್ರಕ್ಕೆ ಡೇಟ್ ಕೊಟ್ಟರೆ, ಸನ್ನಿ ಡಿಯೋಲ್‍ ಮುಂದಿನ ವರ್ಷದ ಏಪ್ರಿಲ್‍ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ಮುಂದಿನ ವರ್ಷದ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಲಿದ್ದು, ವರ್ಷದ ಅಂತ್ಯಕ್ಕೆ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ಹಿಂದೆ ‘ದಂಗಲ್‍’ ಚಿತ್ರವನ್ನು ನಿರ್ದೇಶಿಸಿದ್ದ ನಿತೀಶ್‍ ತಿವಾರಿ, ಈ ‘ರಾಮಾಯಣ’ ಚಿತ್ರದ ನಿರ್ದೇಶಕರು. ರಾಮನಾಗಿ ರಣಬೀರ್ ‍ಕಪೂರ್‍ ನಟಿಸುತ್ತಿದ್ದರೆ, ಸೀತೆಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಸನ್ನಿ ಡಿಯೋಲ್‍, ಆಂಜನೇಯನಾಗಿ ಕಾಣಿಸಿಕೊಳ್ಳುತ್ತಿದ್ದು, ಯಶ್‍ ಈ ಚಿತ್ರದಲ್ಲಿ ರಾವಣನಾಗಿ ನಟಿಸಲಿದ್ದಾರೆ.

‘ರಾಮಾಯಣ’ ಚಿತ್ರವನ್ನು ಪ್ರೈಮ್‍ ಫೋಕಸ್‍ ಸ್ಟುಡಿಯೋಸ್‍ನ ನಮಿತ್‍ ಮಲ್ಹೋತ್ರಾ ನಿರ್ಮಿಸುತ್ತಿದ್ದು, ಈ ಚಿತ್ರದ ನಿರ್ಮಾಣದಲ್ಲಿ ಯಶ್‍ ಅವರ ಮಾನ್ಸ್ಟರ್‍ ಮೈಂಡ್‍ ಕ್ರಿಯೇಷನ್ಸ್ ಸಹ ಸೇರಿಕೊಂಡಿದೆ.

ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಂಡಿದೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದೆ. ಈ ಚಿತ್ರದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ.

Tags: