ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಿಂದ ದಿನಕ್ಕೊಂದು ಅಪ್ಡೇಟ್‍ಗಳು ಬರುತ್ತಿವೆ. ಇತ್ತೀಚೆಗೆ ಚಿತ್ರದಲ್ಲಿ ಕನ್ನಡದ ನಟ ಉಪೇಂದ್ರ ನಟಿಸುತ್ತಾರೆ ಎಂದು ಹೇಳಲಾಯ್ತು. ನಂತರ ಬಾಲಿವುಡ್ ನಟ ಆಮೀರ್ ಖಾನ್ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯ್ತು. ಇದಾದ ಮೇಲೆ ತೆಲುಗು ನಟ ನಾಗಾರ್ಜುನ ಹಾಗೂ ಮಲಯಾಳಂ ನಟ ಶೌಬಿನ್ ಅವರ ಪಾತ್ರಗಳನ್ನು ಪರಿಚಯಿಸುವ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.
ಇದೀಗ ಚಿತ್ರಕ್ಕೆ ಶ್ರುತಿ ಹಾಸನ್ ಸೇರ್ಪಡೆಯಾಗಿರುವ ಸುದ್ದಿ ಬಂದಿದೆ. ಈ ಚಿತ್ರದಲ್ಲಿ ಅವರು ಪ್ರೀತಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ಇತ್ತೀಚೆಗೆ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಾರಾ? ಎಂಬ ಗುಸುಗುಸು ಸಹ ಕೇಳಿಬರುತ್ತಿದೆ.
ಶ್ರುತಿ ಹಾಸನ್, ಕಮಲ್ ಹಾಸನ್ ಅವರ ಮಗಳು. ಕಮಲ್ ಹಾಸನ್ ಮತ್ತು ರಜನಿಕಾಂತ್ ಹಲವು ವರ್ಷಗಳ ಗೆಳೆಯರು. ಇಬ್ಬರೂ ಹೆಚ್ಚೂ ಕಡಿಮೆ ಒಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದಷ್ಟೇ ಅಲ್ಲ, ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದವರು. ಈಗ ಅಪ್ಪನ ಸ್ನೇಹಿತನ ಜೊತೆಗೆ ಶ್ರುತಿ ನಾಯಕಿಯಾಗಿ ನಟಿಸುತ್ತಿದ್ದಾರಾ? ಎಂಬ ಪ್ರಶ್ನೆಯೊಂದು ಕೇಳಿ ಬರುತ್ತಿದೆ. ಆದರೆ, ಚಿತ್ರತಂಡದವರಾಗಲೀ, ಶ್ರುತಿ ಹಾಸನ್ ಆಗಲೀ, ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿಲ್ಲ.
ಹೀಗಾಗುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ, ಚಿರಂಜೀವಿ ಅಭಿನಯದ ‘ವಾಲ್ಟರ್ ವೀರಯ್ಯ’ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಚಿರಂಜೀವಿ ಸಹ ಕಮಲ್ ಹಾಸನ್ ಅವರ ಸ್ನೇಹಿತನೇ. ಇನ್ನು, ರಜನಿಕಾಂತ್ ಅಭಿನಯದ ‘ಲಿಂಗ’ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದರು. ವಿಶೇಷವೆಂದರೆ, ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಮತ್ತು ರಜನಿಕಾಂತ್ ಹಲವು ವರ್ಷಗಳ ಗೆಳೆಯರು.
ಅಂದಹಾಗೆ, ‘ಕೂಲಿ’ ಚಿತ್ರದಲ್ಲಿ ಶ್ರುತಿ, ಪ್ರೀತಿ ಎಂಬ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ನೋಟ ಸಹ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪೋಸ್ರ್ ಹಂಚಿಕೊಳ್ಳುವ ಮೂಲಕ ನಿರ್ದೇಶಕ ಲೋಕೇಶ್ ಕನಕರಾಜ್, ಶ್ರುತಿ ಹಾಸನ್ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.
‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಶ್ರುತಿ ಹಾಸನ್, ಉಪೇಂದ್ರ, ಸತ್ಯರಾಜ್, ಮಹೇಂದ್ರನ್ ಮುಂತಾದವರು ನಟಿಸುತ್ತಿದ್ದು, ಲೋಕೇಶ್ ಕನಕರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.