ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘45’ ಚಿತ್ರವು ಆಗಸ್ಟ್.15ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಒಂದು ಹಾಡನ್ನು ಹೊರತುಪಡಿಸಿದರೆ, ಮಿಕ್ಕಂತೆ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿಯುತ್ತಾ ಬಂದಿವೆ.
ಈ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಮೂವರೂ ಜೊತೆಗೆ ಕಾಣಿಸಿಕೊಳ್ಳುತ್ತಿದ್ದು, ಅವರ ಜೊತೆಗೆ ಹೆಜ್ಜೆ ಹಾಕಲು ಉಗಾಂಡದಿಂದ ‘ಜಿಟೊ ಕಿಡ್ಸ್’ ಎಂಬ ನೃತ್ಯಗಾರರ ತಂಡವು ಬೆಂಗಳೂರಿಗೆ ಬಂದಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಅವರು ಉಗಾಂಡದಿಂದ ಆಗಮಿಸಿದ ನೃತ್ಯಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಈ ಹಾಡಿನ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ‘ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಪ್ರಮೋಷನ್ ಸಾಂಗ್ಸ್ ಇರುತ್ತದೆ. ಆದರೆ, ನಾವು ಸ್ವಲ್ಪ ವಿಭಿನ್ನವಾಗಿ ಮಾಡೋಣ ಅಂದುಕೊಂಡಿದ್ದೇವೆ. ತಮ್ಮ ಅಮೋಘ ನೃತ್ಯದಿಂದ ಇಡೀ ವಿಶ್ವದಲ್ಲೇ ಪ್ರಸಿದ್ದರಾಗಿರುವ ಉಗಾಂಡದ ‘ಜಿಟೊ ಕಿಡ್ಸ್’ ಎಂಬ ನೃತ್ಯಗಾರರ ತಂಡ ಈ ಹಾಡಿನ ಭಾಗವಾಗಲಿದೆ. ಇವರು ಇದೇ ಮೊದಲು ಭಾರತಕ್ಕೆ ಆಗಮಿಸಿ ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಕನ್ನಡದಲ್ಲಿ ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ’ ಎಂದರು.
ಇನ್ನು, ಈ ಚಿತ್ರದ ಪ್ರಚಾರದ ಕೆಲಸಗಳು ಪ್ರಾರಂಭವಾಗಿದ್ದು, ಇತ್ತೀಚೆಗೆ ಶಿವರಾಜ್ ಕುಮಾರ್, ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ, ಗೀತಾ ಶಿವರಾಜಕುಮಾರ್ ಮುಂತಾದವರು ಖಾಸಗಿ ಪ್ಲೇನ್‍ನಲ್ಲಿ ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಕೊಚ್ಚಿಯಲ್ಲಿ ಚಿತ್ರದ ಪ್ರಚಾರ ಮಾಡಿ ಬಂದಿದ್ದಾರೆ.
ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಜೊತೆಗೆ ಕೌಸ್ತುಭ ಮಣಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸತ್ಯ ಹೆಗಡೆ ಛಾಯಾಗ್ರಹಣವಿದೆ.