ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘ಯು/ಐ’ ಚಿತ್ರವು ಈ ವರ್ಷ ಬಿಡುಗಡೆಯಾಗುವುದೇ ಸಂಶಯ ಎಂಬಂತಹ ಮಾತುಗಳಿದ್ದವು. ಏಕೆಂದರೆ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರತಂಡ ಇನ್ನೂ ಬಿಡುಗಡೆ ದಿನಾಂಕವನ್ನೇ ಘೋಷಿಸಿರಲಿಲ್ಲ. ಈಗ ಚಿತ್ರವನ್ನು ಅಕ್ಟೋಬರ್‍ನಲ್ಲಿ ಬಿಡುಗಡೆ ಮಾಡುವುದಾಗಿ ಉಪೇಂದ್ರ ಘೋಷಿಸಿದ್ದಾರೆ.
‘ಯು/ಎ’ ಚಿತ್ರವು ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಆದರೆ, ಹುಟ್ಟುಹಬ್ಬಕ್ಕೆ ಇನ್ನೊಂದು ತಿಂಗಳವೂ ಇಲ್ಲ. ಹೀಗಿರುವಾಗ ಸೆ. 18ರ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ ಎಂಬ ಖಾತ್ರಿ ಇತ್ತು. ಹಾಗಾದರೆ, ಬೇರೆ ಯಾವಾಗ ಎಂಬ ಪ್ರಶ್ನೆಯೂ ಇತ್ತು. ಮುಂದಿನ ದಿನಗಳಲ್ಲಿ ‘ಮಾರ್ಟಿನ್’, ‘ಭೈರತಿ ರಣಗಲ್’, ‘ಕೆಡಿ – ದಿ ಡೆವಿಲ್’ ಮುಂತಾದ ಚಿತ್ರಗಳು ಬಿಡುಗಡೆಗೆ ಇರುವುದರಿಂದ, ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಆಗಬಹುದು ಎಂಬ ಮಾತು ಸಹ ಕೇಳಿ ಬಂದಿತ್ತು.
ಆದರೆ, ಅಷ್ಟು ದಿನ ಕಾಯಬೇಕಿಲ್ಲ, ಚಿತ್ರವನ್ನು ಅಕ್ಟೋಬರ್‍ನಲ್ಲೇ ತೋರಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ಈ ಪೋಸ್ಟರ್‍ನಲ್ಲಿ ಚಿತ್ರ ಅಕ್ಟೋಬರ್‍ನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಆದರೆ, ಬಿಡುಗಡೆಯ ನಿಖರ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ. ಉಪೇಂದ್ರ ಸದ್ಯದಲ್ಲೇ ಒಂದು ಡೈಲಾಗ್ ಟೀಸರ್ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದು, ಆ ಟೀಸರ್‍ನಲ್ಲಿ ಚಿತ್ರದ ಬಿಡುಗಡೆ ಯಾವಾಗ ಎಂದು ಅಧಿಕೃತವಾಗಿ ತಿಳಿಸಲಾಗುತ್ತದಂತೆ.
‘ಯು/ಐ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಮಿಕ್ಕಂತೆ ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.
‘ಯು/ಐ’ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‍ಟೈನರ್ಸ್ ಸಂಸ್ಥೆಗಳಡಿ ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.