ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಅಂದುಕೊಂಡ ದಿನದಂದು ಬಿಡುಗಡೆಯಾಗುವುದು ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಚಿತ್ರತಂಡವು ಇದನ್ನು ನಿರಾಕರಿಸಿದ್ದು, ಘೋಷಣೆಯಾದಂತೆಯೇ ಚಿತ್ರವು 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ ಎಂದು ಹೇಳಿದೆ.
‘ಟಾಕ್ಸಿಕ್’ ಚಿತ್ರವು ಕಳೆದ ವರ್ಷ ಯಶ್ ಹುಟ್ಟುಹಬ್ಬದಂದು ಘೋಷಣೆಯಾಗಿತ್ತು. ಘೋಷಣೆಯ ದಿನವೇ, ಚಿತ್ರವನ್ನು 2025ರ ಏಪ್ರಿಲ್ 10ರಂದು ಜಗತ್ತಿನಾದ್ಯಂತ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಚಿತ್ರದ ಕೆಲಸಗಳು ನಿಧಾನವಾದ ಕಾರಣ, ಏಪ್ರಿಲ್.10ರಂದು ಬಿಡುಗಡೆ ಮಾಡುವುದು ಕಷ್ಟದ ವಿಷಯವಾಗಿತ್ತು. ಆದರೆ, ಚಿತ್ರದ ಬಿಡುಗಡೆಯನ್ನು ಮುಂದೂಡುತ್ತಿರುವ ಬಗ್ಗೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಬಂದಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಅದರ ಪ್ರಕಾರ 2026ರ ಮಾರ್ಚ್ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನು ಓದಿ; ಯಶ್ ನಟನೆಯ ಟಾಕ್ಸಿಕ್ ಬಿಡುಗಡೆಗೆ ಡೇಟ್ ಫಿಕ್ಸ್
ಆದರೆ, ಚಿತ್ರೀಕರಣ ಅಂದುಕೊಂಡಂತೆ ಸಾಗುತ್ತಿಲ್ಲ, ಚಿತ್ರೀಕರಣ ನಿಧಾನವಾಗಿ ಸಾಗುತ್ತಿರುವುದರಿಂದ ಚಿತ್ರವು ಅಂದುಕೊಂಡಂತೆ ಬಿಡುಗಡೆಯಾಗುತ್ತಿಲ್ಲ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಇದನ್ನು ನಿರಾಕರಿಸಿರುವ ಚಿತ್ರತಂಡ, ಚಿತ್ರವು 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ ಎಂದು ಹೇಳಿದೆ.
‘ಟಾಕ್ಸಿಕ್’ ಮೊದಲು ಪ್ಯಾನ್ ಇಂಡಿಯಾ ಚಿತ್ರವಾಗಿ ಶುರುವಾದರೂ ಈಗ ಪ್ಯಾನ್ ವರ್ಲ್ಡ್ ಚಿತ್ರವಾಗಿದೆ. ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‍ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹಾಲಿವುಡ್ ನಟ ಕೈಲ್ ಪಾಲ್, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್, ಅನಿಲ್ ಕಪೂರ್, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.





