ಮೋಹನ್ ಲಾಲ್ ಅಭಿನಯದಲ್ಲಿ ಕನ್ನಡದ ನಂದಕಿಶೋರ್, ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈಗ ಅದೇ ಹೆಸರಿನಲ್ಲಿ ಸದ್ದಿಲ್ಲದೆ, ಇನ್ನೊಂದು ಕನ್ನಡ ಚಿತ್ರ ತಯಾರಾಗಿದೆ. ಅಷ್ಟೇ ಅಲ್ಲ, ಆ ಪ್ಯಾನ್ ಇಂಡಿಯಾ ಚಿತ್ರದಿಂದಾಗಿ, ತಮಗೆ ಸಮಸ್ಯೆ ಎದುರಾಗಿದೆ ಎಂದು ಚಿತ್ರತಂಡ ಅಳಲು ತೋಡಿಕೊಂಡಿದೆ.
‘ವೃಷಭ’ ಚಿತ್ರವು ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಉಮೇಶ್ ಹೆಬ್ಬಾಳ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುವುದರ ಜೊತೆಗೆ, ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ‘ವೃಷಭ’ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.
ಇದನ್ನು ಓದಿ: ನಿಂತೇ ಹೋಯ್ತಾ ಯುವ, ‘ದುನಿಯಾ’ ಸೂರಿ ಹೊಸ ಸಿನಿಮಾ?
ಈ ಚಿತ್ರದ ಕುರಿತು ಮಾತನಾಡುವ ಉಮೇಶ್, ‘ಈ ಚಿತ್ರ ನನ್ನ ಬಹುದಿನಗಳ ಕನಸು. ವರ್ಷದ ಹಿಂದೆ ಏಕ್ತಾ ಕಪೂರ್ ಸಂಸ್ಥೆಯವರು ಪತ್ರ ಬರೆದು, ಟೈಟಲ್ ಕೊಡ್ತೀರಾ ಎಂದು ಕೇಳಿದ್ದರು. ಆನಂತರ ನಮ್ಮ ಸಂಪರ್ಕಕ್ಕೆ ಬರಲಿಲ್ಲ. ನಾವು ಕೆ. ಮಂಜು ಅವರ ಮೂಲಕ ನಂದಕಿಶೋರ್ ಸಂಪರ್ಕಿಸಿ ಕೇಳಿದಾಗ, ಅವರು ಕನ್ನಡದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದ್ದರು. ಇದೀಗ ನೋಡಿದರೆ, ಅವರು ‘ವೃಷಭ’ ಹೆಸರಿನಲ್ಲಿ ಕನ್ನಡದಲ್ಲೂ ಬಿಡುಗಡೆ ಮಾಡುತ್ತಿದ್ದಾರೆ. ಅದು ಸ್ಟಾರ್ ಸಿನಿಮಾ. ನವೆಂಬರ್.6ರಂದು ಬಿಡುಗಡೆಯಾಗುತ್ತಿದೆ. ಆಮೇಲೆ ನಾವು ಬಂದರೆ ಜನರಿಗೆ ಸಹಜವಾಗಿಯೇ ಗೊಂದಲವಾಗುತ್ತದೆ. ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ದಾಖಲಿಸಿದ್ದೇವೆ. ಅವರು ಕನ್ನಡ ಶೀರ್ಷಿಕೆ ರಿಜಿಸ್ಟರ್ ಮಾಡಿಸದೇ ಬಿಡುಗಡೆ ಮಾಡಲು ಹೊರಟಿದ್ದಾರೆ’ ಎಂದರು.
ಇದು ಗೂಳಿ ತರಹದ ವ್ಯಕ್ತಿತ್ವ ಇರುವ ರೈತನೊಬ್ಬನ ಕಥೆ ಎನ್ನುವ ಉಮೇಶ್, ‘ರೈತ ಎಂದರೆ ಬರೀ ಹೊಲದಲ್ಲಿ ಕೆಲಸ ಮಾಡುವವನಲ್ಲ. ಆತನನ್ನು ಕೆಣಕಿದರೆ ಸುಮ್ಮನಿರಲ್ಲ. ಆತನಿಗೂ ತಾಕತ್ತಿರುತ್ತೆ ಅಂತ ಹೇಳಲು ಹೊರಟಿದ್ದೇವೆ. ನಾನು ನಮ್ಮ ಚಿತ್ರದಲ್ಲಿ ತೋರಿಸುತ್ತಿರುವ ರೈತನೇ ಬೇರೆ. ಈ ಚಿತ್ರದಲ್ಲಿ ಹಲವು ವಿಷಯಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ‘ವೃಷಭ’ ಶೀರ್ಷಿಕೆಯ ಮೇಲೆ ನಮ್ಮ ಚಿತ್ರದ ಶೀರ್ಷಿಕೆ ನಿಂತಿದೆ’ ಎಂದರು.
‘ವೃಷಭ’ ಚಿತ್ರಕ್ಕೆ ರಾಯ ಬಡಿಗೇರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಗ್ರಹಣ ಮಾಡಿದ್ದು, ಪ್ರಣವ್ ಸಂಗೀತ ಸಂಯೋಜಿಸಿದ್ದಾರೆ. ಮಂಡ್ಯ ಸುತ್ತಮುತ್ತ ‘ವೃಷಭ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.





