Mysore
19
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ನಗುವಿಲ್ಲ: ರವಿಚಂದ್ರನ್‍

ಕಳೆದ ತಿಂಗಳು ಬಿಡುಗಡೆಯಾದ ಪೃಥ್ವಿ ಅಂಬಾರ್‍ ಮತ್ತು ಪ್ರಮೋದ್‍ ಅಭಿನಯದ ‘ಭುವನಂ ಗಗನಂ’ ಚಿತ್ರವು 25 ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಚಿತ್ರದ ನಿರ್ಮಾಪಕ ಮುನೇಗೌಡ, ಸಮಾರಂಭ ಆಯೋಜಿಸಿ ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಂದು ಮಾತನಾಡಿರುವ ರವಿಚಂದ್ರನ್‍, ‘ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ನಗುವಿಲ್ಲ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಒಂದು ಚಿತ್ರ ಯಶಸ್ವಿ 25 ದಿನ ಪ್ರದರ್ಶನವಾಗಿರುವುದು ಖುಷಿಯ ವಿಚಾರ. ಜನ ಚಿತ್ರ ನೋಡುವುದಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ಬರುತ್ತಾರೆ ಅಷ್ಟೇ. ಜನ ಚಿತ್ರ ನೋಡುತ್ತಿಲ್ಲ ಎಂದು ಗೋಳಾಡಿದರೆ ಅವರು ಯಾವತ್ತೂ ಸಿನಿಮಾ ನೋಡುವುದಿಲ್ಲ’ ಎಂದರು ರವಿಚಂದ್ರನ್‍.

ಇತ್ತೀಚಿನ ವರ್ಷಗಳಲ್ಲಿ ನಾವು ಶೀಲ್ಡ್ಗಳನ್ನು ನೋಡುವುದೇ ಮರೆತುಬಿಟ್ಟಿದ್ದೇವೆ ಎಂದಿರುವ ಅವರು, ‘ಈಗ 25 ದಿನಗಳಿಗೇ ಶೀಲ್ಡ್ ಕೊಡುವ ಪರಿಪಾಠ ಶುರುವಾಗಿದೆ. ಆಗ 25 ವಾರಕ್ಕೆ ಇತ್ತು. ಈಗ 25 ದಿನ ನೋಡಿದರೆ ಸಾಕು ಎನ್ನುವಂತಾಗಿದೆ. ಅದರಲ್ಲಿ ತಪ್ಪೇನಿಲ್ಲ. ಆಗ ಚಿತ್ರ ಬಿಡುಗಡೆ ಮಾಡುತ್ತಿದ್ದುದಕ್ಕೂ, ಈಗ ಮಾಡುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಗ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ ಸಾವಿರಾರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ 25 ದಿನ ಓಡುವುದು ಸಹ ದೊಡ್ಡ ವಿಷಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಭುವನಂ ಗಗನಂ’ ಚಿತ್ರದಲ್ಲಿ ಪ್ರಮೋದ್‍ಗೆ ನಾಯಕಿಯಾಗಿ ರಾಚೆಲ್‍ ಡೇವಿಡ್‍ ಮತ್ತು ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಮಿಕ್ಕಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ‘ಸಿದ್ಲಿಂಗು’ ಶ್ರೀಧರ್, ಮುಂತಾದವರು ನಟಿಸಿದ್ದಾರೆ. ಈ ಹಿಂದೆ ‘ರಾಜರು’ ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್‍ ಮೂಲಿಮನಿ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Tags:
error: Content is protected !!