ಕನ್ನಡದ ಕ್ಲಾಸಿಕ್ ಚಿತ್ರಗಳ ಪೈಕಿ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ‘ನಾಗರಹಾವು’ ಚಿತ್ರ ಸಹ ಒಂದು. ತ.ರಾ.ಸು ಕಾದಂಬರಿ ಆಧರಿಸಿದ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು. ವಿಷ್ಣುವರ್ಧನ್, ಅಂಬರೀಷ್, ಆರತಿ, ಶುಭಾ, ಧೀರೇಂದ್ರ ಗೋಪಾಲ್ ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಈ ಚಿತ್ರದ ಮೂಲಕ ಬೆಳಕಿಗೆ ಬಂದವು.
ಈಗ್ಯಾಕೆ ಈ ವಿಷಯವೆಂದರೆ, ‘ನಾಗರಹಾವು’ ಬಿಡುಗಡೆಯಾಗಿ 53 ವರ್ಷಗಳ ನಂತರ ಆ ಚಿತ್ರದ ಮುಂದಿನ ಭಾಗವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈಗಾಗಲೇ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಈ ಹಿಂದೆ ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ’ ಮತ್ತು ‘ದೇವನಹಳ್ಳಿ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಪಲ್ಲಕ್ಕಿ ರಾಧಾಕೃಷ್ಣ, ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥೆಯನ್ನು ಅವರು ಹಿಂದೊಮ್ಮೆ ವಿಷ್ಣುವರ್ಧನ್ ಅವರಿಗೆ ಹೇಳಿದ್ದು, ಅವರು ಸಹ ಮೆಚ್ಚಿಕೊಂಡಿದ್ದರಂತೆ. ಆದರೆ, ಅವರು ನಿಧನರಾದ ನಂತರ ಚಿತ್ರವನ್ನು ಮಾಡುವುದು ಬೇಡವೆಂದು ಸುಮ್ಮನಿದ್ದರಂತೆ. ಒಮ್ಮೆ ಉತ್ತರ ಕರ್ನಾಟಕಕ್ಕೆ ಹೋದ ಸಂದರ್ಭದಲ್ಲಿ ಒಂದು ನಾಟಕ ನೋಡಿದ್ದಾರೆ. ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾಗಿರುವ ಜಯಶ್ರೀ ರಾಜ್ ಈ ನಾಟಕದಲ್ಲಿ ನಟಿಸಿದ್ದನ್ನು ನೋಡಿ, ಯಾಕೆ ಅವರನ್ನಿಟ್ಟುಕೊಂಡು ಚಿತ್ರ ಮಾಡಬಾರದು ಎಂದನಿಸಿ, ಚಿತ್ರ ಮಾಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಪಲ್ಲಕ್ಕಿ ರಾಧಾಕೃಷ್ಣ, ‘‘ನಾಗರಹಾವು’ ಚಿತ್ರ ನಿಂತಲ್ಲಿಂದ ಈ ಚಿತ್ರ ಮುಂದುವರೆಯುತ್ತದೆ. ಮೂಲ ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ರಾಮಾಚಾರಿ ಮತ್ತು ಮಾರ್ಗರೆಟ್ ಬೆಟ್ಟದ ಮೇಲಿಂದ ಬೀಳುತ್ತಾರೆ ಎಂದು ತೋರಿಸಲಾಗಿದೆ. ಅವರೇನಾದರೂ ಎಂದು ತೋರಿಸಿಲ್ಲ. ನಮ್ಮ ಚಿತ್ರದಲ್ಲಿ ಮಾರ್ಗೆರೆಟ್ ಪಾತ್ರ ಸತ್ತಿರುತ್ತದೆ. ರಾಮಾಚಾರಿ ಬದುಕುಳಿಯುತ್ತಾನೆ. ಪೈಲ್ವಾನ್ ಬಸಪ್ಪ ರಾಮಾಚಾರಿಗೆ ಆಶ್ರಯ ನೀಡಿ, ವೃತ್ತಿ ರಂಗಭೂಮಿಗೆ ಸೇರಿಸುತ್ತಾರೆ. ಅಲ್ಲಿ ರಾಮಾಚಾರಿ ಹಲವು ನಾಟಕಗಳಲ್ಲಿ ಪಾತ್ರ ಮಾಡುವುದರ ಜೊತೆಗೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅವರಿಗೆ ಹುಟ್ಟಿದ ಮಗುವೇ ಚಾಮಯ್ಯ. ಮುಂದೆ ರಾಮಾಚಾರಿ ಬದುಕಿನಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದ ಕಥೆ’ ಎಂದು ವಿವರಿಸುತ್ತಾರೆ ಅವರು.
ಈ ಚಿತ್ರಕ್ಕೆ ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆಯಂತೆ. ಮೂಲ ಚಿತ್ರದ ಕೆಲವು ಪಾತ್ರಗಳು ಇಲ್ಲೂ ಮುಂದುವರೆಯಲಿದ್ದು, ಅದರ ಜೊತೆಗೆ ರಾಧಾಕೃಷ್ಣ ಸಹ ಜಲೀಲನ (ಅಂಬರೀಷ್) ಮಗ ಚೋಟಾ ಜಲೀಲ್ ಆಗಿ ನಟಿಸಿದ್ದಾರೆ.
‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರವನ್ನು ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.





