Mysore
25
broken clouds
Light
Dark

ಕನ್ನಡಕ್ಕೆ ‘ಕಲ್ಕಿ 2898 AD’ ಚಿತ್ರದ ಸಂಗೀತ ನಿರ್ದೇಶಕ…

ತಮಿಳು ಮತ್ತು ತೆಲುಗಿನಲ್ಲಿ ‘ಕಬಾಲಿ’, ‘ಕಾಲ’, ‘ಕಲ್ಕಿ 2898 AD’ ಮುಂತಾದ ಯಶಸ್ವಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್‍ ನಾರಾಯಣ್‍ ಇದೀಗ ಕನ್ನಡಕ್ಕೆ ಬಂದಿದ್ದಾರೆ. ವಿನೋದ್‍ ಪ್ರಭಾಕರ್ ಅಭಿನಯದಲ್ಲಿ ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿರುವ ‘ಬಲರಾಮನ ದಿನಗಳು’ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ‘ಬಲರಾಮನ ದಿನಗಳು’ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಈಗ ಅಕ್ಟೋಬರ್ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡಕ್ಕೆ ಸಂತೋಷ್‍ ನಾರಾಯಣ್‍ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಅವರನ್ನು ಅಧಿಕೃತವಾಗಿ ಚಿತ್ರತಂಡಕ್ಕೆ ಬರಮಾಡಿಕೊಳ್ಳಲಾಗಿದೆ.

ಇದುವರೆಗೂ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 50 ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಸಂತೋಷ್‍ ನಾರಾಯಣ್‍ ಅವರಿಗೆ ಸಂಗೀತ ನಿರ್ದೇಶಕರಾಗಿ ‘ಬಲರಾಮನ ದಿನಗಳು’ 51ನೇ ಚಿತ್ರವಾಗಿದೆ. ಈ ಚಿತ್ರದ ಕುರಿತು ಮಾತನಾಡಿದ ಅವರು, ‘ನನ್ನ ತಾಯಿ ಬಡಕುಟುಂಬದಿಂದ ಬಂದವರು. ಅವರನ್ನು ಪೋಷಿಸಿ, ಬೆಳೆಸಿದ್ದು ಅವರ ಪಕ್ಕದ ಮನೆಯಲ್ಲಿದ್ದ ಕನ್ನಡದವರು. ನನ್ನ ತಾಯಿ ಚೆನ್ನಾಗಿ ಕನ್ನಡ ಮಾತಾಡುತ್ತಾರೆ. ಕನ್ನಡದವರ ಪ್ರೀತಿಯಿಂದ ಇವತ್ತು ನಾನು ನಿಮ್ಮ ಎದುರು ಇಲ್ಲಿ ಬಂದು ನಿಂತಿದ್ದೇನೆ. ಇದಕ್ಕೂ ಮೊದಲು ರಘು ದೀಕ್ಷಿತ್‍ ಸಂಗೀತ ನಿರ್ದೇಶನದಲ್ಲಿ ಒಂದು ಚಿತ್ರಕ್ಕೆ ಪ್ರೋಗ್ರಾಮಿಂಗ್ ಮಾಡಿದ್ದೆ. ಈಗ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುತ್ತಿದ್ದೇನೆ. ಚಿತ್ರದ ಸಂಗೀತ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ’ ಎಂದರು.

ವಿನೋದ್‍ ಪ್ರಭಾಕರ್‍ ಮಾತನಾಡಿ, ‘ಸಂತೋಷ್‍ ನಾರಾಯಣ್‍ ಯಾರು ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲದಿರಬಹುದು, ಜನ ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್‍ಸ್ಟರ್‍ ಸಿನಿಮಾ ಅಂತ ಬಂದರೆ, ಅವರು ನೆನಪಾಗ್ತಾರೆ. ಅವರ ಸಂಗೀತ ನೆನಪಿಗೆ ಬರುತ್ತದೆ. ಸಂತೋಷ್‍ ಅವರನ್ನು ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. ‘ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್‍ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು’ ಎಂದರು.

ಇದು ನೈಜ ಘಟನೆಯನ್ನಾಧರಿಸಿದ ಚಿತ್ರವಲ್ಲ ಎನ್ನುವ ಚೈತನ್ಯ, ‘ಇದು 80-90ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಇದೊಂದು ಕಾಲ್ಪನಿಕ ಕಥೆ. ವಿನೋದ್‍ ಪ್ರಭಾಕರ್‍ ಅವರ ಜೊತೆಗೆ ಕೆಲಸ ಮಾಡುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ’ ಎಂದರು.

‘ಬಲರಾಮನ ದಿನಗಳು’ ಚಿತ್ರವನ್ನು ಪದ್ಮಾವತಿ ಫಿಲಂಸ್ ಬ್ಯಾನರ್‍ನಡಿ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.