Mysore
19
few clouds

Social Media

ಬುಧವಾರ, 21 ಜನವರಿ 2026
Light
Dark

ನಿಜಜೀವನದ ದಂಪತಿಯೇ ನಾಯಕ-ನಾಯಕಿ: ಶರಧಿ ಕಿರುಚಿತ್ರ ಬಿಡುಗಡೆ

ವಿಶ್ವದಲ್ಲೇ ಮೊದಲು ಎನ್ನುವಂತೆ ನಿಜಜೀವನದ ಅಂಧ ದಂಪತಿ, ಇದೀಗ ಕಿರುಚಿತ್ರವೊಂದರಲ್ಲಿ ಜೊತೆಯಾಗಿ ನಟಿಸಿದ್ದು, ಆ ಕಿರುಚಿತ್ರ ಇದೀಗ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ‘ಶರತ್ ಮತ್ತು ಶರಧಿ’ ಹೆಸರಿನ ಈ ಕಿರುಚಿತ್ರವನ್ನು ’ಏಪ್ರಿಲ್‌ನ ಹಿಮಬಿಂದು’ ಚಿತ್ರ ನಿರ್ದೇಶಿಸಿದ್ದ ಎಂ. ಜಗದೀಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಟಾಕ್‌ಗುರು ಕ್ರಿಯೇಶನ್ಸ್ ಅಡಿಯಲ್ಲಿ ಗಣೇಶ್ ಬಿ.ಎಂ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ : ಕಿರುಚಿತ್ರ ‘ಅಮೃತಾಂಜನ್’ ಈಗ ಸಿನಿಮಾ ಆಯ್ತು …

‘ಶರತ್‍ ಮತ್ತು ಶರಧಿ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಜಗದೀಶ್‍, ‘ಮದುವೆಯೊಂದರಲ್ಲಿ ಅಂಧ ದಂಪತಿಯನ್ನು ಭೇಟಿ ಮಾಡುವ ಸಂದರ್ಭ ಬಂತು. ಆಗ ಯಾಕೆ ಅಂಧ ದಂಪತಿಯ ಜೀವನದ ಕುರಿತು ಚಿತ್ರ ಮಾಡಬಾರದು ಎಂಬ ಯೋಚನೆ ಬಂತು. ಆಗ ವೀರೇಶ್‍ ಮತ್ತು ಅಶ್ವಿನಿ ಅವರನ್ನು ಭೇಟಿ ಮಾಡಿದೆ. ಅವರು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದರು. ಒಂದು ಸನ್ನಿವೇಶದಲ್ಲಿ ನಾವು ಕರೆಂಟ್ ಬಿಲ್ ದುಡ್ಡು ಉಳಿಸಬಹುದು ಎಂಬ ಸಂಭಾಷಣೆ ಇತ್ತು. ಅಶ್ವಿನಿ ಅವರು, ‘ಇದನ್ನು ತೆಗೆದುಬಿಡಿ. ನಮಗೆ ಕತ್ತಲೆ ಇರಬಹುದು. ನಮ್ಮ ಮನೆಯಲ್ಲಿ ಕತ್ತಲಿರಬಾರದು. ಹಾಗೆನಾದರೂ ಇದ್ದರೆ ರಸ್ತೆಯಲ್ಲಿ ಕತ್ತಲೆ ಮನೆ ಆಂತ ಆಗೋಗುತ್ತೆ’ ಎಂದು ಹೇಳಿದರು. ಇಬ್ಬರೂ ಬದುಕನ್ನು ಸಕರಾತ್ಮಕವಾಗಿ ನೋಡುತ್ತಿದ್ದಾರೆ. ಇನ್ನು, ದತ್ತಣ್ಣ ಕಿರುಚಿತ್ರ ಒಪ್ಪಿಕೊಳ್ಳುವುದಿಲ್ಲ. ಆದರೆ, ವಿಷಯಗಳು ಚೆನ್ನಾಗಿರುವುದರಿಂದ ಯಾವುದೇ ಸಂಭಾವನೆ ಪಡೆಯದೆ ನಟಿಸಿ ಪ್ರೋತ್ಸಾಹ ಕೊಟ್ಟರು’ ಎಂದರು.

ಹಿರಿಯ ನಟ ದತ್ತಣ್ಣ ಮಾತನಾಡಿ, ‘ವೀರೇಶ್ ಹಾಗೂ ಅಶ್ವಿನಿ ಎಲ್ಲರ ಮಧ್ಯೆ ಸುಖದಿಂದ ಬದುಕಿನ ಪಯಣ ಸಾಗಿಸುತ್ತಿದ್ದಾರೆ. ನಮಗೂ ಅವರಿಗೂ ದೊಡ್ಡ ವ್ಯತ್ಯಾಸ ಏನು ಇಲ್ಲ. ಸಮಾಜ ಕೂಡ ಅವರನ್ನು ಬೇರೆ ರೀತಿಯಲ್ಲಿ ನೋಡಬೇಕಾದ ಅಗತ್ಯ ಇಲ್ಲ. ನಾವು ವಿಭಿನ್ನವಾಗಿ ಸಬಲರಾಗಿದ್ದೇವೆ. ನಾವು ಅಂಗವಿಕಲರಲ್ಲ ಎಂಬ ಅರ್ಥಪೂರ್ಣ ಸಂದೇಶ ಹೇಳಿದ್ದಾರೆ. ನಿರ್ದೇಶಕರು ಹೇಳಿದಂತೆ ಅರ್ಥೈಸಿಕೊಂಡು ದಂಪತಿಗಳು ಕ್ಯಾಮರಾ ಮುಂದೆ ಅಭಿನಯಿಸಿದ್ದಾರೆ. ಇಂತಹ ಚಿತ್ರಕ್ಕೆ ಮಾನ್ಯತೆ ಸಿಗಬೇಕು’ ಎಂದರು.

Tags:
error: Content is protected !!