Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

‘ದಿ ರೈಸ್ ಆಫ್ ಅಶೋಕ’ ಚಿತ್ರದ ಮೊದಲ ಹಾಡು ಬಿಡುಗಡೆ

ಸತೀಶ್ ನೀನಾಸಂ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಒಂದೂವರೆ ವರ್ಷಗಳೇ ಆಗಿವೆ. ಕಳೆದ ವರ್ಷ ‘ಮ್ಯಾಟ್ನಿ’ ಚಿತ್ರ ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವ ಚಿತ್ರವೂ ಬಿಡುಗಡೆ ಆಗಿಲ್ಲ. ಹೀಗಿರುವಾಗಲೇ, ಸತೀಶ್‍ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಬಿಡುಸಗಡೆಯಾಗಲಿದೆ. ಮೊದಲ ಹಂತವಾಗಿ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

‘ದಿ ರೈಸ್‍ ಆಫ್‍ ಅಶೋಕ’ ಚಿತ್ರದ ಮೊದಲ ಹಾಡು ಬಿಡುಗಡೆ ಸಮಾರಂಭವು ಇತ್ತೀಚೆಗೆ ಬೆಂಗಳೂರಿನ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸ್ವತಃ ಸತೀಶ್, ‘ಏಳೋ ಏಳೋ ಮಹಾದೇವ …’ ಎಂಬ ಗೀತೆಯನ್ನು ರಚಿಸಿದ್ದಾರೆ. ಈ ಹಾಡನ್ನು ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸಲಾಯಿತು. ಆ ನಂತರ ಚಿತ್ರತಂಡದವರೆಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದರು.

ಹಾಡು ಬಿಡುಗಡೆ ಬಳಿಕ ಮಾತನಾಡಿದ ಸತೀಶ್‌ ನೀನಾಸಂ, ‘ಈ ತರಹದ ಸಿನಿಮಾ ಮಾಡೋದು ಸುಲಭವಲ್ಲ. ‘ಅಯೋಗ್ಯ’ ಚಿತ್ರವನ್ನು ನಾನು ಪ್ರಚಾರ ಮಾಡದಿದ್ದರೂ, ಮನೆಯಲ್ಲಿ ಮಲಗಿದ್ದರೂ ಜನ ನೋಡುತ್ತಾರೆ ಎಂಬ ಭರವಸೆ ಇದೆ. ಆದರೆ, ಇದು ಹಾಗಲ್ಲ. ಈ ಚಿತ್ರದ ಕಥೆಯೇ ವಿಭಿನ್ನ. ಈ ಚಿತ್ರವನ್ನು ಬೇರೆ ಭಾಷೆಗಳಿಗೆ ಮಾಡಲು ಹೋದಾಗ, ನನಗೆ ಪ್ಯಾನ್‍ ಇಂಡಿಯಾ ಹುಚ್ಚು ಹಿಡಿದಿದೆ ಎಂದರು. ನನಗೂ ‘ಕೆಜಿಎಫ್‍’, ‘ಕಾಂತಾರ’ ತರಹ ಸಿನಿಮಾ ಮಾಡಬೇಕು ಎಂದು ಬಹಳ ಇಷ್ಟ. ಈ ಚಿತ್ರಕ್ಕೆ ಒಂದು ರೂಪಾಯಿ ಸಂಭಾವನೆ ತೆಗೆದುಕೊಂಡಿಲ್ಲ. ಆದರೂ ಚಿತ್ರ ದೊಡ್ಡದಾಗಿ ವಿಳಂಬವಾಯಿತು. ಸಮಸ್ಯೆಗಳೆಲ್ಲಾ ಮುಗಿದು, ಚಿತ್ರೀಕರಣ ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ನಿರ್ದೇಶಕರು ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು’ ಎಂದರು.

ಈ ಚಿತ್ರಕ್ಕಾಗಿ ಮೂರು ವರ್ಷ ಕಣ್ಣೀರು ಹಾಕಿದ್ದಾಗಿ ಹೇಳುವ ಸತೀಶ್‍, ‘ಸಮಸ್ಯೆಗಳೆಲ್ಲಾ ಬಗೆಹರಿದು ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಗುತ್ತೆ. ಮೂರು ವರ್ಷ ರಾತ್ರಿ ಕಣ್ಣೀರು ಹಾಕಿ ಸಿನಿಮಾ ಮುಗಿಸಿದ್ದೇವೆ. ನನ್ನ ಶತ್ರುಗಳು ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡು ಮೂರು ವರ್ಷದಲ್ಲಿ, ಆರು ಸಿನಿಮಾ ಮಾಡಬಹುದಿತ್ತು ಮೂರು ವರ್ಷದಲ್ಲಿ. ಆದರೆ, ಮಾಡಲಿಲ್ಲ. ಏಕೆಂದರೆ, ‘ದಿ ರೈಸ್ ಆಫ್ ಅಶೋಕ’ ನಮಗೆ ಸರ್ವಸ್ವವೂ ಆಗಿತ್ತು’ ಎಂದರು.

ನಟಿ ಸಪ್ತಮಿ ಗೌಡ ಮಾತನಾಡಿ, ‘ನಾನು ಸಿನಿಮಾ ತಂಡಕ್ಕೆ ಕೊನೆಯಾಗಿ ಸೇರ್ಪಡೆಯಾದೆ. ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ. ಇಡೀ ತಂಡಕ್ಕೆ ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಎಲ್ಲರೂ ಅವರ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ’ ಎಂದರು.

ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಖೇರ್, ಸಾಧ್ವಿನಿ ಕೊಪ್ಪ ಹಾಗೂ ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ‘ದಿ ರೈಸ್ ಆಫ್ ಅಶೋಕ’, 70ರ ದಶಕದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ‘ದಿ ರೈಸ್ ಆಫ್ ಅಶೋಕ’.

ಈ ಚಿತ್ರದಲ್ಲಿ ಸತೀಶ್‍ ಮತ್ತು ಸಪ್ತಮಿ ಜೊತೆಗೆ ಬಿ. ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ಹರೀಶ್ ಪೆರಾಡಿ, ಜಗಪ್ಪ ಮುಂತಾದವರು ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿರುವ ಈ ಚಿತ್ರವನ್ನು ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Tags:
error: Content is protected !!