ತರುಣ್ ಸುಧೀರ್ ಹಾಗೂ ಸೋನಲ್ ಮುಂದಿನ ತಿಂಗಳು ಮದುವೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಆದರೆ, ಇಬ್ಬರೂ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿರಲಿಲ್ಲ. ಸೋಮವಾರ ಬೆಳಿಗ್ಗೆ ಹೊಸ ವೀಡಿಯೋ ಬಿಡುಗಡೆ ಮಾಡುವ ಮೂಲಕ ಸೋನಲ್ ಮತ್ತು ತರುಣ್ ತಮ್ಮ ಮದುವೆ ಸುದ್ದಿಯನ್ನು ಖಾತ್ರಿಪಡಿಸಿದ್ದಾರೆ.
ಪ್ರತಿ ಸಿನಿಮಾದಲ್ಲಿಯೂ ತಮ್ಮ ಕ್ರಿಯೆಟಿವಿಟಿ ಮೂಲಕ ಪ್ರೇಕ್ಷಕರ ಮುಂದೆ ಹೊಸ ಹೊಸ ಕಥೆ ತರುವ ನಿರ್ದೇಶಕ ತರುಣ್ ಸುಧೀರ್ ಈಗ ತಮ್ಮ ಜೀವನದ ರಿಯಲ್ ನಾಯಕಿಯನ್ನು ಪರಿಚಯಿಸುವುದಕ್ಕೂ ಒಂದು ವೀಡಿಯೋ ಮಾಡಿದ್ದಾರೆ.
ತರುಣ್ ಮತ್ತು ಸೋನಲ್ ಇಬ್ಬರೂ ಚಿತ್ರರಂಗದವರೇ ಆದ್ದರಿಂದ ಇಬ್ಬರೂ ತಮ್ಮ ಪ್ರೀ-ವೆಡ್ಡಿಂಗ್ ವೀಡಿಯೋವನ್ನು ಚಿತ್ರಮಂದಿರದಲ್ಲಿ ಚಿತ್ರೀಕರಣ ಮಾಡಲಾಗಿದೆ. ನವರಂಗ್ ಚಿತ್ರಮಂದಿರದಲ್ಲಿ ತರುಣ್ ಹಲವು ಚಿತ್ರಗಳನ್ನು ನೋಡಿದವರು. ಅಷ್ಟೇ ಅಲ್ಲ, ಆ ಚಿತ್ರಮಂದಿರದಲ್ಲೇ ಅವರ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಂಡಿವೆ. ಹಾಗಾಗಿ, ಈ ಚಿತ್ರಮಂದಿರದಲ್ಲೇ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಾಹಕ ಎ.ಜೆ ಶೆಟ್ಟಿ ಈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಇನ್ನು, ಪ್ರೀ-ವೆಡ್ಡಿಂಗ್ ವೀಡಿಯೋದಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ವಸ್ತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್‍ಗೆ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು ಸೋನಾಲ್ ಅವರಿಗೆ ರಶ್ಮಿ ಡಿಸೈನ್ ಮಾಡಿದ್ದಾರೆ.
ತರುಣ್ ಮತ್ತು ಸೋನಲ್ ಮದುವೆ ವಿಷಯ ದರ್ಶನ್ ಅವರಿಗೆ ತರುಣ್ ಮದುವೆ ಮೊದಲೇ ಗೊತ್ತಿತ್ತು. ತರುಣ್ ಇತ್ತೀಚೆಗೆ ಜೈಲಿಗೆ ಭೇಟಿ ಕೊಟ್ಟು ದರ್ಶನ್ ಅವರನ್ನು ಮಾತನಾಡಿಸಿ ಬಂದಿದ್ದಾರೆ. ಜೈಲಿನಲ್ಲಿ ದರ್ಶನ್ ಇರುವುದರಿಂದ ಮದುವೆ ಮುಂದೂಡುವ ಮಾತಾಡಿದರಂತೆ ತರುಣ್. ಈ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಮದುವೆ ಡೇಟ್ ಮುಂದೂಡಬಾರದು ಎಂದು ದರ್ಶನ್ ಹೇಳಿ ಕಳುಹಿಸಿದ್ದಾರಂತೆ. ಹಾಗಾಗಿ, ದರ್ಶನ್ ಅನುಪಸ್ಥಿತಿಯಲ್ಲೇ ತರುಣ್ ಮತ್ತು ಸೋನಲ್ ಮದುವೆಯು ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್ ನಲ್ಲಿ ನಡೆಯಲಿದೆ.