Mysore
15
clear sky

Social Media

ಶುಕ್ರವಾರ, 23 ಜನವರಿ 2026
Light
Dark

‘ಬಾಸ್‍’ ಆಗಿ ಬಂದ ತನುಷ್ ಶಿವಣ್ಣ; ಈ ಚಿತ್ರಕ್ಕೂ ದರ್ಶನ್‍ ಪ್ರಕರಣಕ್ಕೂ ಸಂಬಂಧವಿದೆಯಾ?

ಕಳೆದ ವರ್ಷ ‘ನಟ್ವರ್ ಲಾಲ್‍’ ಚಿತ್ರದಲ್ಲಿ ನಟಿಸಿದ್ದ ತನುಷ್‍ ಶಿವಣ್ಣ ಈಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ‘ಬಾಸ್‍’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರೀಕರಣ ಸಹ ಮುಗಿದಿದೆ. ಎಲ್ಲಾ ಅಂದುಕಕೊಂಡಂತೆ ಆದರೆ, ಡಿಸೆಂಬರ್‍ ತಿಂಗಳಲ್ಲೇ ಚಿತ್ರ ಬಿಡುಗಡೆಯಾಗಲಿದೆ.

‘ಬಾಸ್‍’ ಚಿತ್ರದ ಪೋಸ್ಟರ್ ನೋಡುತ್ತಿದ್ದರೆ, ದರ್ಶನ್‍ ಪ್ರಕರಣಕ್ಕೆ ಸಂಬಂಧವಿರುವ ಅನುಮಾನ ಬರುತ್ತದೆ. ಮೊದಲಿಗೆ ಅಭಿಮಾನಿಗಳು ದರ್ಶನ್‍ ಅವರನ್ನು ‘ಬಾಸ್‍’ ಎಂದು ಕರೆಯುತ್ತಾರೆ. ಎರಡನೆಯದಾಗಿ, ಚಿತ್ರವು ನೈಜ ಘಟನೆಯನ್ನಾಧರಿಸಿದ ಕೊಲೆ ಪ್ರಕರಣದ ಸುತ್ತ ಸುತ್ತುತ್ತದೆ. ಇಲ್ಲೂ ನಾಯಕ ಒಬ್ಬ ಸೆಲೆಬ್ರಿಟಿಯಾಗಿದ್ದು, ಆತನ ಅಭಿಮಾನಿಗಳು ‘ಬಾಸ್‍’ ಎಂದು ಸಂಬೋಧಿಸುತ್ತಿರುತ್ತಾರಂತೆ. ಹಾಗಾಗಿ, ದರ್ಶನ್‍ ಪ್ರಕರಣವನ್ನು ಆಧರಿಸಿ ಚಿತ್ರ ಮಾಡಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಅನಿಸುವ ಸಾಧ್ಯತೆ ಇದೆ. ಆದರೆ, ಈ ವಿಷಯವನ್ನು ನಿರ್ದೇಶಕ ಲವ ಬಹಿರಂಗಪಡಿಸುವುದಿಲ್ಲ. ಚಿತ್ರವನ್ನು ನೋಡಿ ಎನ್ನುತ್ತಾರೆ.

ಇದನ್ನು ಓದಿ: ಕನ್ನಡದ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾದ ‘ಕಾಂತಾರ – ಚಾಪ್ಟರ್ 1’

‘ಬಾಸ್‍’ ಬಗ್ಗೆ ಮಾಹಿತಿ ನೀಡುವ ಅವರು, ‘ಇದೊಂದು ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ. ಕೆಲವೇ ದಿನಗಳಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆಯತ್ತಿದೆ. ತನುಷ್ ಶಿವಣ್ಣ ಚಿತ್ರದ ನಾಯಕನಾಗಿ ನಟಿಸಿದ್ದು, ಮೋನಿಕಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ‘ಸತ್ಯಮೇವ ಜಯತೇ’ ಎಂಬ ಅಡಿಬರಹವಿದೆ’ ಎಂದರು.

ಇದು ನಾನು ನಾಯಕನಾಗಿ ನಟಿಸಿರುವ ಐದನೇ ಚಿತ್ರ ಎಂದು ಮಾತನಾಡಿದ ನಾಯಕ ತನುಷ್ ಶಿವಣ್ಣ, ‘ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಎಲ್ಲರೂ ನನ್ನ ‘ಬಾಸ್’ ಎನ್ನುತ್ತಾರೆ’ ಎಂದರು.

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್.ಆರ್ ಪುರ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನವಿದೆ. ಚಿತ್ರದಲ್ಲಿ ಸಂದೀಪ್, ವೀರೇನ್ ಕೇಶವ್, ಸುಜನ್ ಶೆಟ್ಟಿ, ‘ದುನಿಯಾ’ ಮಹೇಶ್, ‘ಜೋಶ್’ ಅಕ್ಷಯ್‍ ಮುಂತಾದವರು ನಟಿಸಿದ್ದಾರೆ.

Tags:
error: Content is protected !!