ಶಿವರಾಜಕುಮಾರ್ ಹುಟ್ಟುಹಬ್ಬಕ್ಕೆ ಹಲವು ಚಿತ್ರಗಳ ಟೀಸರ್ ಮತ್ತು ಪೋಸ್ಟರ್‍ಗಳು ಬಿಡುಗಡೆಯಾಗಿವೆ. ಈ ಮಧ್ಯೆ, ಶಿವರಾಜಕುಮಾರ್ ಅಭಿನಯದ 131ನೇ ಚಿತ್ರದ ಟೀಸರ್ ಮತ್ತು ಮೊದಲ ನೋಟವೂ ಬಿಡುಗಡೆಯಾಗಿದೆ.
ಈ ಹಿಂದೆ ಕನ್ನಡ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಅವರನ್ನು ಕರೆ ತಂದು, ಅವರಿಂದ ಶಿವರಾಜಕುಮಾರ್ ಅಭಿನಯದಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರವನ್ನು ಮಾಡಿಸಿದ ಸುಶೀರ್, ಈಗ ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಕಾರ್ತಿಕ್ ಅದ್ವೈತ್ ನಿರ್ದೇಶನ ಮಾಡುತ್ತಿದ್ದಾರೆ.
ಮೂರು ನಿಮಿಷ 49 ಸೆಕೆಂಡ್‍ನ ಟೀಸರ್‍ನ ವಿಶೇಷತೆಯೆಂದರೆ, ಎಲ್ಲೂ ಶಿವರಾಜಕುಮಾರ್ ಕಾಣುವುದಿಲ್ಲ. ಪೊಲೀಸ್ ಸ್ಟೇಶನ್‍ನಲ್ಲಿ ಚಿತ್ರೀಕರಣಗೊಂಡಿರುವ ಈ ಟೀಸರ್‍ನಲ್ಲಿ ಅಚ್ಯುತ್ ಕುಮಾರ್, ರವೀಂದ್ರ ವಿಜಯ್ ಮುಂತಾದವರು ನಟಿಸಿದ್ದಾರೆ. ರೌಡಿಯೊಬ್ಬನ ಕುರಿತು ಅಚ್ಯುತ್ ಕುಮಾರ್ ವರ್ಣನೆ ಮಾಡುವ ಮತ್ತು ಆತನ ಸ್ಕೆಚ್ ಸಿದ್ಧಪಡಿಸುವ ಈ ಟೀಸರ್‍ನಲ್ಲಿ ಮಾತಿನಲ್ಲಿ ಶಿವರಾಜಕುಮಾರ್ ಅವರಿಗೆ ಬಿಲ್ಡಪ್ ನೀಡಲಾಗಿದೆ. ಲಾಂಗನ್ನು ಲಾಂಗೆಸ್ಟ್ ಟೈಮ್ ಹಿಡಿದಿರುವ ವ್ಯಕ್ತಿ ಎಂಬ ವಿಷಯ ಪ್ರಸ್ತಾಪವಾಗಲಿದ್ದು, ‘ಓಂ’ ಮತ್ತು ‘ಜೋಗಿ’ ಚಿತ್ರಗಳನ್ನು ನೆನಪಿಸುತ್ತದೆ. ‘ಐ ಆ್ಯಮ್ ಕಮಿಂಗ್’ ಎಂದು ಶಿವರಾಜಕುಮಾರ್ ಧ್ವನಿ ಮತ್ತು ಸ್ಕೆಚ್ ಬರುವ ಮೂಲಕ ಈ ಟೀಸರ್ ಅಂತ್ಯವಾಗುತ್ತದೆ.
ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವಣ್ಣ ವಿಭಿನ್ನ ಲುಕ್ ಮತ್ತು ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ.
ಈ ಚಿತ್ರಕ್ಕೆ ‘ದೇವ’ ಎಂಬ ಹೆಸರು ಇಡುವ ಸಾಧ್ಯತೆ ಇದ್ದು, ಸಿ.ಎಸ್ ಸಂಗೀತ ಮತ್ತು ಎ.ಜೆ ಶೆಟ್ಟಿ ಛಾಯಾಗ್ರಹಣವಿದೆ. ಭುವನೇಶ್ವರಿ ಪ್ರೊಡಕ್ಷನ್ ಸಂಸ್ಥೆಯಡಿ ಎಸ್.ಎನ್. ರೆಡ್ಡಿ ಹಾಗೂ ಸುಧೀರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.



