‘ಮಾರ್ಕ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರವು ಡಿಸೆಂಬರ್.25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಸರೆಗಮಪ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ‘ಸೈಕ್ ಸೈತಾನ್ …’ ಎಂಬ ಮಾಸ್ ಗೀತೆ ಬಿಡುಗಡೆಯಾಗಿದೆ.
ಅನೂಪ್ ಭಂಡಾರಿ ಹಾಡಿಗೆ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ‘ಸೈಕೋ ಸೈತಾನ್ …’ ಹಾಡು ಬಿಡುಗಡೆಯಾದ ಬೆನ್ನಲ್ಲೇ ಮಾರ್ಕ್ ಚಿತ್ರತಂಡ ಸಿನಿಮಾ ಪ್ರೇಮಿಗಳಿಗೆ ಹುಕ್ ಸ್ಟೆಪ್ ಡ್ಯಾನ್ಸ್ ಚಾಲೆಂಜ್ ನೀಡಿದೆ.
ಇದನ್ನು ಓದಿ: ಸುದೀಪ್ ಸೋದರಳಿಯ ಸಂಚಿತ್ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಟೀಸರ್ ಬಂತು
ಈ ಹಾಡಿನಲ್ಲಿ ಸುದೀಪ್ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ಡ್ಯಾನ್ಸ್ ಮಾಡಬೇಕು. ಬಳಿಕ ಅದನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಮಾಡಬೇಕು. ಹೀಗೆ ವಿಡಿಯೊ ಪೋಸ್ಟ್ ಮಾಡುವಾಗ @markthefilm ಇನ್‌ಸ್ಟಾ ಅಕೌಂಟ್‌ನ್ನ ಟ್ಯಾಗ್ ಮಾಡಿರಬೇಕು ಮತ್ತು #MARKHOOKSTEPCHALLENGE ಎಂದು ಹ್ಯಾಷ್‌ಟ್ಯಾಗ್ ಬಳಸಿರಬೇಕು. ಅತ್ಯುತ್ತಮ ರೀಲ್ಸ್‌ಗಳಿಗೆ @markthefilm ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲು ಮತ್ತು ಅವರಿಗೆ ಬಹುಮಾನ ನೀಡಲು ಚಿತ್ರತಂಡ ತೀರ್ಮಾನ ಮಾಡಿದೆ.
ಈ ಹಿಂದೆ ‘ಮ್ಯಾಕ್ಸ್’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ, ‘ಮಾರ್ಕ್’ ಚಿತ್ರಕ್ಕೂ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ನಿರ್ಮಿಸುತ್ತಿವೆ. ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ, ಗಣೇಶ್ ಬಾಬು ಸಂಕಲನವಿದೆ.
‘ಮಾರ್ಕ್’ ಚಿತ್ರದಲ್ಲಿ ಸುದೀಪ್, ಗೋಪಾಲಕೃಷ್ಣ ದೇಶಪಾಂಡೆ, ರಾಘು ರಾಮನಕೊಪ್ಪ, ರೋಶನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.





