ಸಿನಿಮಾ ನಾಯಕರಂತೆ, ನಾಯಕಿಯರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಅದರಲ್ಲೂ ಕಳೆದ ಮೂರು ವರ್ಷಗಳಿಂದ ಚಿತ್ರರಂಗದಲ್ಲಿರುವ ಮತ್ತು ಹಿರಿಯ ನಟಿಯಾಗಿರುವ ಶ್ರುತಿ, ಇತ್ತೀಚಿನ ವರ್ಷಗಳಲ್ಲಿ ಬಹಿರಂಗವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ.
ಹೀಗಿರುವಾಗಲೇ ಶ್ರುತಿ, ಗುರುವಾರ (ಸೆ.18) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ತಮ್ಮ ನಿಜಜೀವನದಲ್ಲಿ 50 ವರ್ಷ ಪೂರೈಸಿರುವ ಶ್ರುತಿ, ವೃತ್ತಿ ಬದುಕಿನಲ್ಲಿ 35 ವರ್ಷಗಳನ್ನು ಪೂರೈಸಿದ್ದಾರೆ. ಅವರು ನಟಿಸಿದ ಮೊದಲ ಚಿತ್ರ ‘ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರವು 1990ರಲ್ಲಿ ಬಿಡುಗಡೆಯಾಗಿ 35 ವರ್ಷಗಳನ್ನು ಪೂರೈಸಿದೆ. ಈ ಚಿತ್ರದಲ್ಲಿ ಅವರು ಪ್ರಿಯದರ್ಶಿನಿ ಎಂಬ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗಾಗಲೇ ಮಾರ್ಚ್ ತಿಂಗಳಲ್ಲೇ ಈ ಚಿತ್ರ ಬಿಡುಗಡೆಯಾಗಿ 35 ವರ್ಷಗಳಾಗಿವೆ.
ಇದನ್ನೂ ಓದಿ: ಬಾಲಕಿ ಸೇರಿದಂತೆ 8 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ : ಬೆಂಗಳೂರಿನ ಯೋಗ ಗುರು ಬಂಧನ
ಈ ಡಬ್ಬಲ್ ಸಂಭ್ರಮವನ್ನು ಶ್ರುತಿ ಚಿತ್ರರಂಗದ ಬಾಂಧವರ ಜೊತೆಗೆ ಹಂಚಿಕೊಂಡಿದ್ದಾರೆ. ಇಸ್ಕಾನ್‍ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್, ರವಿಚಂದ್ರನ್, ಮಾಲಾಶ್ರೀ, ಮಾಳವಿಕಾ ಅವಿನಾಶ್, ಡಾ. ಜಯಮಾಲಾ, ಅನು ಪ್ರಭಾಕರ್, ರವಿಶಂಕರ್, ಬಿ.ಸಿ. ಪಾಟೀಲ್, ಶರಣ್, ಆರಾಧನಾ ರಾಮ್, ಉಮಾಶ್ರೀ ಸೇರಿದಂತೆ ಹಲವರು ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಶ್ರುತಿ ತಮ್ಮ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸಿಕೊಂಡರು.
ಈ ಕಾರ್ಯಕ್ರಮವನ್ನು ಶ್ರುತಿ ಅವರ ಮಗಳು ಗೌರಿ ಆಯೋಜಿಸಿದ್ದು ವಿಶೇಷವಾಗಿತ್ತು.





