ಆಂಧ್ರ ಪ್ರದೇಶದ ಸರಳ, ಸಜ್ಜನ ರಾಜಕಾರಣಿ ಮತ್ತು ಕಮ್ಯುನಿಸ್ಟ್ ಪಕ್ಷದ ನಾಯಕ ಗುಮ್ಮಡಿ ನರಸಯ್ಯನವರ ಕುರಿತು ಒಂದು ಬಯೋಪಿಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್, ‘ಗುಮ್ಮಡಿ ನರಸಯ್ಯ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಿವರಾಜಕುಮಾರ್ ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಬಯೋಪಿಕ್‍ನಲ್ಲಿ ನಟಿಸಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ಆಂಧ್ರದ ಮಾಜಿ ಶಾಸಕ ಮತ್ತು ಹೋರಾಟಗಾರಿ ಗುಮ್ಮಡಿ ನರಸಯ್ಯ ಅವರ ಕುರಿತಾದ ‘ಗುಮ್ಮಡಿ ನರಸಯ್ಯ’ ಎಂಬ ಬಯೋಪಿಕ್‍ನಲ್ಲಿ ನಟಿಸುತ್ತಿದ್ದಾರೆ.
ಇದನ್ನು ಓದಿ: ಸಿನಿಮಾ ನಿರ್ಮಾಣದತ್ತ ಪ್ರಜ್ವಲ್: ಪುರಾತನ ಫಿಲಂಸ್ ಜೊತೆ ನಿರ್ಮಾಣ
ಗುಮ್ಮಡಿ ನರಸಯ್ಯ ಅವರು ಕಮ್ಯುನಿಸ್ಟ್ ನಾಯಕನಾಗಿ ಗುರುತಿಸಿಕೊಂಡವರು. ಆಂಧ್ರದ ಕಮ್‍ಮಮ್ ಜಿಲ್ಲೆಯ ಟೇಕುಲಪಲ್ಲಿ ಗ್ರಾಮದ ಆದಿವಾಸಿ ಸಮುದಾಯದವರು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸೈಕಲ್‍ನಲ್ಲೇ ಓಡಾಡುತ್ತಿದ್ದರು. ರಸ್ತೆ ಬಬದಿಯಲ್ಲೇ ಊಟ ಮಾಡುತ್ತಿದ್ದರು. ತಮಿಳು ನಿರ್ದೇಶಕ ಸಮುದ್ರಕಣಿ, ಗುಮ್ಮಡಿ ನರಸಯ್ಯ ಅವರ ಕುರಿತು ಬಯೋಪಿಕ್ ಮಾಡುವುದಾಗಿ ಘೋಷಿಸಿದ್ದರು. ಅದಕ್ಕೂ ಮೊದಲೇ ಶಿವರಾಜಕುಮಾರ್ ಅಭಿನಯದಲ್ಲಿ ಚಿತ್ರ ಪ್ರಾರಂಭವಾಗುತ್ತಿದ್ದು, ಮೊದಲ ಹಂತವಾಗಿ ದೀಪಾವಳಿಗೆ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಈ ಚಿತ್ರಕ್ಕೆ ಪರಮೇಶ್ವರ್ ಹೈವ್ರಲೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಸುರೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಪರಮೇಶ್ವರ್ ಇದಕ್ಕ ಮೊದಲು ‘ಚಿರು ಗೋಡವಾಲು’, ‘ಲಾವಣ್ಯ ವಿತ್ ಲವ್ ಬಾಯ್ಸ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಸತೀಶ್ ಮುತ್ಯಾಲ ಛಾಯಾಗ್ರಹಣ ಮತ್ತು ಸುರೇಶ್ ಬೊಬ್ಬಿಲಿ ಅವರ ಸಂಗೀತ ಮತ್ತು ಸಂಕಲನ ಈ ಚಿತ್ರಕ್ಕಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು ಮತ್ತು ಕನ್ನಡದಲ್ಲಿ ತಯಾರಾಗಿ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ.





