ಶಿವರಾಜ್‌ಕುಮಾರ್ ಮುಂದಿನ ಚಿತ್ರ ಯಾರಿಗೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ದಿನಕರ್ ತೂಗುದೀಪ, ಲಕ್ಕಿ ಗೋಪಾಲ್, ಹೇಮಂತ್ ರಾವ್ ಸೇರಿದಂತೆ ಹಲವು ನಿರ್ದೇಶಕರು, ಶಿವರಾಜಕುಮಾರ್ ಜೊತೆಗೆ ಚಿತ್ರ ಮಾಡುವುದಕ್ಕೆ ಘೋಷಿಸಿದ್ದಾರೆ. ಈ ಪೈಕಿ ‘ಭೈರತಿ ರಣಗಲ್’ ಚಿತ್ರದ ನಂತರ ಶಿವರಾಜಕುಮಾರ್ ಯಾರ ಜೊತೆಗೆ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ ಉತ್ತರ ಸಿಕ್ಕಿದ್ದು, ಹೇಮಂತ್ ರಾವ್ ಜೊತೆಗೆ ಶಿವರಾಜಕುಮಾರ್ ಚಿತ್ರ ಮಾಡುತ್ತಾರಂತೆ.
ಶಿವರಾಜಕುಮಾರ್ ಅಭಿನಯದಲ್ಲಿ ಹೇಮಂತ್ ರಾವ್ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಫೆಬ್ರವರಿಯಲ್ಲೇ ಕೇಳಿ ಬಂದಿತ್ತು. ಆದರೆ, ಆ ಚಿತ್ರದ ಹೆಸರೇನು, ಯಾವಾಗ ಶುರುವಾಗುತ್ತದೆ ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಚಿತ್ರದ ಹೆಸರು ಘೋಷಣೆಯಾಗಿದ್ದು, ಚಿತ್ರಕ್ಕೆ ‘ಭೈರವನ ಹೊಸ ಪಾಠ’ ಎಂಬ ಹೆಸರನ್ನು ಇಡಲಾಗಿದೆ. ಟೈಟಲ್ ಪೋಸ್ಟರ್ ಸಹ ಗುರುವಾರ ಬಿಡುಗಡೆ ಮಾಡಲಾಗಿದೆ.
ಹೇಮಂತ್ ರಾವ್ ಸಿನಿಮಾಗಳ ಶೀರ್ಷಿಕೆಗಳು ವಿಶಿಷ್ಟವಾಗಿರುವುಷ್ಟೇ ಅಲ್ಲ, ಅಚ್ಚಕನ್ನಡದ ಶೀರ್ಷಿಕೆಗಳಾಗಿರುತ್ತವೆ. ‘ಭೈರವನ ಕೊನೆ ಪಾಠ’ ಸಹ ಇದಕ್ಕೆ ಹೊರತಾಗಿಲ್ಲ. ಈ ಕುರಿತು ಮಾತನಾಡುವ ಅವರು, ‘ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನೆಮಾ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಸಪ್ತ ಸಾಗರದಾಚೆ ಎಲ್ಲೋ’ ಸಿನೆಮಾ ಶೀರ್ಷಿಕೆಗಳು ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾದವು. ‘ಭೈರವನ ಕೊನೆ ಪಾಠ’ ಕೂಡಾ ಆ ಸಾಲಿಗೆ ಸೇರಲಿದೆ. ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ತಲುಪಿಸುವ ಉದ್ದೇಶ ನಮ್ಮದು. ಅದರಲ್ಲೂ ನಾನು ಬಹಳವಾಗಿ ಇಷ್ಟಪಡುವ ಶಿವಣ್ಣ ಅವರ ಸಿನೆಮಾ ಶೀರ್ಷಿಕೆಗಳ ಸೌಂದರ್ಯವನ್ನು ಸದಾ ಕಾಲ ನೆನಪಿರುವಂತೆ ಮಾಡುವುದು ನನ್ನ ಬಯಕೆ’ ಎನ್ನುತ್ತಾರೆ.
ಚಿತ್ರದ ಕುರಿತು ಮಾತನಾಡುವ ಹೇಮಂತ್, ‘ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ಕಥೆಗೆ ಈ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಅಂದಿರೋದು ಯಾಕೆ ಅನ್ನುವುದೇ ಈ ಚಿತ್ರದ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಯಶಸ್ವಿಯಾಗಿ ಹುಟ್ಟುಹಾಕುತ್ತದೆ ಅನ್ನುವುದು ನಮ್ಮ ನಂಬಿಕೆ’ ಎಂದು ವಿವರಿಸುತ್ತಾರೆ.
ಅಂದಹಾಗೆ, ವೈಶಾಖ್ ಜೆ ಫಿಲಂಸ್ ಬ್ಯಾನರ್‍ನಡಿಯಲ್ಲಿ ಈ ಚಿತ್ರವನ್ನು ಡಾ. ವೈಶಾಖ್ ಜೆ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಶಿವರಾಜಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಯಾಗಲಿದೆ.
‘ಭೈರತಿ ರಣಗಲ್’ ಮತ್ತು ‘ಉತ್ತಕಾಂಡ’ ಚಿತ್ರಗಳ ಚಿತ್ರೀಕರಣ ಮುಗಿದ ನಂತರ ‘ಭೈರವನ ಕೊನೆ ಪಾಠ’ ಶುರುವಾಗುವ ಸಾಧ್ಯತೆ ಇದೆ.