ರೌಡಿಸಂ ಚಿತ್ರಗಳಲ್ಲಿ ಇತ್ತೀಚೆಗೆ ತಾಯಿ ಸೆಂಟಿಮೆಂಟ್ ಹಾಡುಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ‘ವಾಮನ’ ಚಿತ್ರದಲ್ಲಿ ‘ಕಂಡ ಕನಸ ರೂಪ…’ ಎಂಬ ತಾಯಿ ಸೆಂಟಿಮೆಂಟ್ ಹಾಡೊಂದು ಕೇಳಿಬಂದಿತ್ತು. ಇದೀಗ ‘ಜಾಂಟಿ ಸನ್ ಆಫ್ ಜಯರಾಜ್’ ಎಂಬ ಇನ್ನೊಂದು ರೌಡಿಸಂ ಹಿನ್ನೆಲೆಯ ಚಿತ್ರದಲ್ಲೂ ತಾಯಿ ಸೆಂಟಿಮೆಂಟ್ ಹಾಡನ್ನು ರೂಪಿಸಲಾಗಿದ್ದು, ಈ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ವಿಶೇಷವೆಂದರೆ, ತಾಯಿ ಸೆಂಟಿಮೆಂಟ್ ಹಾಡುಗಳಿಗೆ ಜನಪ್ರಿಯರಾಗಿರುವ ‘ಜೋಗಿ’ ಪ್ರೇಮ್ ಈ ಹಾಡನ್ನು ಹಾಡಿದ್ದಾರೆ. ಇದಕ್ಕೂ ಮೊದಲು ಅವರು ‘ಎಕ್ಸ್ಕ್ಯೂಸ್ ಮೀ’ ಚಿತ್ರದ ‘ಬ್ರಹ್ಮ ವಿಷ್ಣು ಶಿವ …’, ‘ಜೋಗಿ’ ಚಿತ್ರದ ‘ಕೇಳುವೆನು ವರವನ್ನು ಕೊಡೆ ತಾಯಿ ಜನ್ಮವನು …’ ಮುಂತಾದ ಹಾಡುಗಳನ್ನು ಹಾಡಿದ್ದರು.
‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದಲ್ಲಿ’ಲೋಕದ ಮೂಲ ಬ್ರಹ್ಮನಂತೆ, ಪ್ರೀತಿಯ ಮೂಲ ಅಮ್ಮನಂತೆ, ಅಮ್ಮ ಕ್ಷಮಿಸು …’ ಎನ್ನುವ ಹಾಡನ್ನು ನಿರ್ದೇಶಕ ಆನಂದ್‍ರಾಜ್ ಬರೆದಿದ್ದು, ‘ಜೋಗಿ’ ಪ್ರೇಮ್ ಧ್ವನಿಯಾಗಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಇತ್ತೀಚೆಗೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಚೌಧರಿ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರಕ್ಕೆ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಆನಂದರಾಜ್ ಮಾತನಾಡಿ, ‘ನಾವು ಹಲವರ ಬಳಿ ಯಾವ್ಯಾವುದೋ ಕಾರಣಕ್ಕೆ ಸಾರಿ ಕೇಳುತ್ತೇವೆ. ಆದರೆ ಹೆತ್ತು, ಹೊತ್ತು ಬೆಳೆಸಿದ ಅಮ್ಮನ ಬಳಿ ಕ್ಷಮಿಸು ಅಂತ ಕೇಳೋದಿಲ್ಲ. ನಮ್ಮ ಸಿನಿಮಾ ಮೂಲಕ ಎಲ್ಲಾ ತಾಯಂದರಿಗೂ ಸಾರಿ ಅಂತ ಕೇಳುತ್ತೇವೆ. ಈ ಹಾಡು ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ಬರುತ್ತದೆ. ಮಗ ತಾಯಿ ಆಸೆಪಟ್ಟಂತೆ ಸಮಾಜದಲ್ಲಿ ಬದುಕದೆ, ತನ್ನದೇ ಹಾದಿಯಲ್ಲಿ ಸಾಗುತ್ತಾನೆ. ಕೊನೆಗೆ ಅಮ್ಮನೇ ಸರ್ವಸ್ವ ಎಂದು ತಿಳಿದಾಗ ಹಿನ್ನಲೆಯಲ್ಲಿ ಹಾಡು ಬರುತ್ತದೆ’ ಎಂದು ಹೇಳಿದರು.
ಯೋಗರಾಜ್ ಭಟ್ ಮಾತನಾಡಿ, ‘ಬದುಕಲ್ಲಿ ನಾವು ಏನೇ ತಪ್ಪು ಮಾಡಿದರೂ ಕ್ಷಮಿಸುವಂತಹ ಗುಣ ಇರೋದು ತಾಯಿಗೆ ಮಾತ್ರ. ಇಂತಹ ವಿಷಯವನ್ನು ಇಟ್ಟುಕೊಂಡು ಸಾಹಿತ್ಯ ರಚಿಸಿದ ಆನಂದರಾಜ್, ಸಂಗೀತ ಸಂಯೋಜಕ ಮತ್ತು ಹಾಡು ಹಾಡಿದ ಪ್ರೇಮ್‌ಗೆ ನನ್ನ ಕಡೆಯಿಂದ ವೈಯಕ್ತಿಕ ಅಭಿನಂದನೆಗಳು’ ಎಂದರು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಹೇಳುವಂತೆ, ‘ನಾವು ಎಲ್ಲವನ್ನೂ ಅಮ್ಮನಿಂದ ಮಾಡಿಸಿಕೊಳ್ಳುತ್ತೇವೆ. ಆದರೆ, ಥ್ಯಾಂಕ್ಸ್ ಹೇಳೋದನ್ನು ಮರೆಯುತ್ತೇವೆ. ಈ ನಿಟ್ಟಿನಲ್ಲಿ ಈ ಗೀತೆ ಮನಮುಟ್ಟುವಂತಿದೆ’ ಎಂದರು.
ಸುಗೂರು ಕುಮಾರ್ ನಿರ್ಮಾಣದ ‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದಲ್ಲಿ ಅಜಿತ್ ಜಯರಾಜ್, ನಿವಿಷ್ಕಾ ಪಟೇಲ್, ರಾಜವರ್ಧನ್, ಶರತ್ ಲೋಹಿತಾಶ್ವ, ಕಿಶನ್, ಸೋನು ಪಾಟೀಲ್, ಮೈಕೋ ನಾಗರಾಜ್ ಮುಂತಾದವರು ಅಭಿನಯಿಸಿದ್ದಾರೆ





