‘ಗಂಡ-ಹೆಂಡತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಿಲಕ್, ನಂತರ ಹಲವು ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಹೆಚ್ಚಾಗಿ ಪೋಷಕ ಪಾತ್ರಗಳನ್ನೇ ಮಾಡುತ್ತಿದ್ದ ತಿಲಕ್, ಇದೀಗ ಸದ್ದಿಲ್ಲದೆ ಒಂದು ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಿಲಕ್ ನಟಿಸಿರುವ ಹೊಸ ಚಿತ್ರದ ಹೆಸರು ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’.
ಈ ಚಿತ್ರವನ್ನು ಗಿರೀಶ್ ಕುಮಾರ್ ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಗಿರೀಶ್ ಇದಕ್ಕೂ ಮೊದಲು ‘ಭಾವಚಿತ್ರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಅವರು, ‘ತಿಲಕ್ ಚಿತ್ರದಲ್ಲಿ ಗ್ಯಾಂಗ್‍ಸ್ಟರ್ ಪಾತ್ರ ಮಾಡಿದರೆ, ನಾನು ಪ್ರ್ಯಾಂಕ್‍ಸ್ಟರ್ (ಕುಚೇಷ್ಟೆ ಮಾಡುವವನು) ಪಾತ್ರವನ್ನು ಮಾಡಿದ್ದೇನೆ. ಇದು ಯೂಟ್ಯೂಬರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಈ ಚಿತ್ರವನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿಯು ವೀಕ್ಷಣೆ ಮಾಡಿದ್ದು ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರ ಬಹಳ ಬೇಗ ತೆರೆಗೆ ಬರಲಿದೆ’ ಎಂದು ಹೇಳಿದ್ದಾರೆ.
‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’ ಚಿತ್ರದಲ್ಲಿ ತಿಲಕ್ ಶೇಖರ್, ಗಿರೀಶ್ ಕುಮಾರ್, ವಿರಾನಿಕ ಶೆಟ್ಟಿ, ಬಲ ರಾಜವಾಡಿ, ಹನುಮಂತೇಗೌಡ, ಭವಾನಿ ಪ್ರಕಾಶ್, ಹೊನವಳ್ಳಿ ಕೃಷ್ಣ, ಸಂಗೀತ ಅನಿಲ್, ಸುಂದರ್, ‘ಮಜಾ ಟಾಕೀಸ್’ ಪವನ್ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಜಾನ್ ಕೆನಡಿ ಸಂಗೀತ, ಅಜಯ್ ಕುಮಾರ್ ಛಾಯಾಗ್ರಹಣವಿದೆ.
ಕಳೆದ ವರ್ಷ ಬಿಡುಗಡೆಯಾದ ‘ಜೋಗ್ 101’ ಚಿತ್ರದಲ್ಲಿ ನಟಿಸಿದ ನಂತರ ತಿಲಕ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಇದಲ್ಲದೆ ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.





