ಮೈಸೂರು: ಕಿಚ್ಚ ಸುದೀಪ್ ನಟನೆಯ ʼಮ್ಯಾಕ್ಸ್ʼ ಸಿನಿಮಾ ಬಿಡುಗಡೆಗೊಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ ನೀಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಇಂದು ಮುಂಜಾನೆಯೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಕಿಚ್ಚ ಸುದೀಪ್ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಿದರು.
ನೆಚ್ಚಿನ ನಟ ಬರುತ್ತಿದ್ದಾರೆಂಬ ಸುದ್ದಿ ತಿಳಿದ ಅಸಂಖ್ಯಾತ ಅಭಿಮಾನಿಗಳು ಚಾಮುಂಡಿಬೆಟ್ಟದಲ್ಲಿ ಜಮಾಯಿಸಿದ್ದು ವಿಶೇಷವೆನಿಸಿತ್ತು.
ದೇವಾಲಯಕ್ಕೆ ಆಗಮಿಸಿದ್ದ ಸಾರ್ವಜನಿಕರು ನೆಚ್ಚಿನ ನಟನನ್ನು ಕಂಡು ಶಿಳ್ಳೆ ಒಡೆದು ಜೈಕಾರ ಕೂಗಿದರು. ನಂತರ ಸುದೀಪ್ ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ʼಮ್ಯಾಕ್ಸ್ʼ ಸಿನಿಮಾ ಇದೇ ತಿಂಗಳ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬಿಡುಗಡೆಯಾಗಿ ನಾಲ್ಕು ದಿನ ಪೂರೈಸಿದ್ದು ಬಾಕ್ಸಾಪೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.