ಕನ್ನಡಿಗರು ಹಿಂದಿ ಚಿತ್ರಗಳನ್ನು ನಿರ್ಮಿಸಿದ ಹಲವು ಉದಾಹರಣೆಗಳಿವೆ. ಈಗ ಆ ಸಾಲಿಗೆ ನಟಿ-ನಿರ್ದೇಶಕಿ ಮತ್ತು ಸಾಮಾಜಿಕ ಹೋರಾಟಗಾರ್ತಿ ರೂಪಾ ಅಯ್ಯರ್ ಸೇರಿದ್ದಾರೆ. ರೂಪಾ ಸದ್ದಿಲ್ಲದೆ ಒಂದು ಹಿಂದಿ ಚಿತ್ರವನನು ನಿರ್ಮಿಸಿ-ನಿರ್ದೇಶಿಸಿದ್ದು, ಚಿತ್ರವು ಜನವರಿ.02ರಂದು ಬಿಡುಗಡೆಯಾಗುತ್ತಿದೆ.
ರೂಪಾ ಅಯ್ಯರ್ ನಿರ್ದೇಶನದ ಈ ಚಿತ್ರದ ಹೆಸರು ‘ಆಜಾದ್ ಭಾರತ್’. ಇದೊಂದು ದೇಶಪ್ರೇಮ ಸಾರುವ ಚಿತ್ರವಾಗಿದ್ದು, ಈ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅರ್ಪಣೆ ಮಾಡಲಾಗಿದೆ. ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆ ಈ ಚಿತ್ರದಲ್ಲಿದೆ. ಈ ಚಿತ್ರವನ್ನು ಮೊದಲು ‘ನೀರಾ ಆರ್ಯ’ ಹೆಸರಿನಲ್ಲಿ ಪ್ರಾರಂಭಿಸಲಾಗಿತ್ತು. ಇದೀಗ ‘ಆಜಾದ್ ಭಾರತ್’ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
‘ಅಜಾದ್ ಭಾರತ್’ ಚಿತ್ರದಲ್ಲಿ ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಮೂರು ಮಹಿಳಾ ಮುಖ್ಯ ಪಾತ್ರಗಳಿದ್ದು, ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್ ಕಾಣಿಸಿಕೊಂಡರೆ, ದುರ್ಗಾ ಎಂಬ ಪಾತ್ರವನ್ನು ಹಿತ ಚಂದ್ರಶೇಖರ್ ನಿರ್ವಹಿಸಿದ್ದಾರೆ. ಸರಸ್ವತಿ ರಾಜಾಮಣಿ ಎಂಬ ಮಹತ್ವದ ಪಾತ್ರವನ್ನು ಜನಪ್ರಿಯ ಬಾಲಿವುಡ್ ನಟಿಯೊಬ್ಬರು ಮಾಡಿದ್ದು, ಅದ್ಯಾರು ಎಂದು ರೂಪಾ ಬಿಟ್ಟುಕೊಡುವುದಿಲ್ಲ.
ಇದನ್ನು ಓದಿ: ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ ಪ್ರಕರಣ: ಮಕ್ಕಳಿಗಾಗಿ ಮೈಸೂರಿನಲ್ಲಿ ಕಾಯುತ್ತಿರುವ ಪೋಷಕರು
ಮಿಕ್ಕಂತೆ ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯಸ್ಥರಾದ ಸುಭಾಷ್ ಚಂದ್ರ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ರೂಪಾ ಪತಿ ಗೌತಮ್ ಶ್ರೀವತ್ಸ ಸಂಗೀತ, ಶ್ರಿ ಕ್ರೇಜಿ ಮೈಂಡ್ಸ್ ಸಂಕಲನವಿದೆ. ಈ ಚಿತ್ರವನ್ನು ರೂಪಾ ಅಯ್ಯರ್, ಜಯಗೋಪಾಲ್ ಹಾಗೂ ರಾಜೇಂದ್ರ ರಾಜನ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಜನವರಿ ತಿಂಗಳನ್ನು ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಮಾಸ ಎಂದು ಆಚರಿಸುತ್ತಾರೆ. ಹಾಗಾಗಿ, ಜನವರಿ ಎರಡನೇ ತಾರೀಖು ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ಚಿತ್ರದ ಕುರಿತು ಮಾತನಾಡುವ ರೂಪಾ ಅಯ್ಯರ್, ‘‘ಆಜಾದ್ ಭಾರತ್’ ಚಿತ್ರವನ್ನು ನಿರ್ಮಾಣ ಮಾಡುವ ಮೊದಲು ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರನ್ನು ಸಂಪರ್ಕ ಮಾಡಿ ಅನೇಕ ಮಾಹಿತಿ ಪಡೆದುಕೊಂಡಿದ್ದೇನೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಚಿತ್ರ ತೋರಿಸುವ ಯೋಚನೆ ಇದೆ. 2026ರ ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಅವರು ತಿಳಿಸಿದರು.
‘ರೂಪಾ ಅಯ್ಯರ್ ಅವರು ಒಂದು ಕಾಲದ ಹೇಳದೇ ಹೋದ ಘಟನೆಗಳನ್ನು ತೆರೆಯ ಮೇಲೆ ಹೇಳಲು ಹೊರಟ್ಟಿದ್ದಾರೆ. ಇದಕ್ಕಾಗಿ ಬಹಳ ವರ್ಷಗಳ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಅವರ ರಾಷ್ಟ್ರಪ್ರೇಮ’ ಎಂದು ಸುಚೇಂದ್ರ ಪ್ರಸಾದ್ ಹೇಳಿದರೆ, ‘ಇಂತಹ ದೇಶಪ್ರೇಮ ಸಾರುವ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ’ ಎಂದು ದುರ್ಗಾ ಪಾತ್ರದಲ್ಲಿ ಅಭಿನಯಿಸಿರುವ ಹಿತ ಚಂದ್ರಶೇಖರ್ ಹೇಳಿದರು.
‘ಆಜಾದ್ ಭಾರತ್’ ಚಿತ್ರದಲ್ಲಿ ಏಳು ಹಾಡುಗಳಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತ ಫಡ್ನವಿಸ್ ಒಂದು ಹಾಡನ್ನು ಹಾಡಿದ್ದಾರಂತೆ.





