Mysore
26
light rain

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ನಿಜ ಜೀವನ ಆಯ್ತು; ಸಿನಿಮಾದಲ್ಲೂ ರೈತನಾದ ಕಿಶೋರ್

ಬಹುಭಾಷಾ ನಟ ಕಿಶೋರ್, ನಿಜಜೀವನದಲ್ಲಿ ವ್ಯವಸಾಯ ಮಾಡುತ್ತಾರೆ ಎಂಬುದು ಗೊತ್ತಿರುವ ವಿಷಯವೇ. ಕೆಲವು ವರ್ಷಗಳಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು, ರೈತರ ಪರ ಆಗಾಗ ಧ್ವನಿ ಎತ್ತುತ್ತಲೇ ಇರುತ್ತಾರೆ. ಈಗ ಅವರು ಸಿನಿಮಾದಲ್ಲೂ ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಕಬಂಧ’ ಒಂದು ಹಾರರ್‍ ಚಿತ್ರವಾಗಿದ್ದು, ವ್ಯವಸಾಯದ ಸುತ್ತ ಇರುವ ಹಲವು ಸಮಸ್ಯೆಗಳ ಬಗ್ಗೆ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ‘ಇದು ವ್ಯವಸಾಯದ ಸುತ್ತ ಇರುವ ಒಂದು ಸಮಸ್ಯೆಯ ಕುರಿತದ ಚಿತ್ರ. ಆ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಆದರೆ, ನಾವು ಅದರ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಅರಿವು ಮೂಡಿಸುತ್ತಿಲ್ಲ. ನಮಗ್ಯಾಕೆ ಎಂದು ಎಲ್ಲರೂ ಸುಮ್ಮನಿದ್ದುಬಿಟ್ಟಿದ್ದೇವೆ. ಇನ್ನೂ ಗಮನಹರಿಸದಿದ್ದರೆ ಬಹಳ ಕಷ್ಟವಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಸತ್ಯನಾಥ್‍.

ಈ ಚಿತ್ರದ ಬಗ್ಗೆ ಮಾತನಾಡುವ ಕಿಶೋರ್‍, ‘ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮ. ಇದನ್ನು ಉಳಿಸಿಕೊಳ್ಳದಿದ್ದರೆ, ನಾವು ನಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನು ಕಳೆದುಕೊಳ್ಳುತ್ತೇವೆ. ದೆವ್ವವನ್ನು ಬಳಸಿಕೊಂಡು ಒಂದು ಸಮಸ್ಯೆಯನ್ನು ಹೇಳುವ ಪ್ರಯತ್ನ ಇದು. ಸ್ಟಾರ್‍ಗಳಿಲ್ಲದ ಸಿನಿಮಾದಲ್ಲಿ ದೆವ್ವ ಅಥವಾ ದೇವರನ್ನು ಹಿಡಿದುಕೊಳ್ಳಬೇಕು. ಅವರೇ ನಮಗೆ ದೊಡ್ಡ ಸ್ಟಾರ್‍ಗಳು. ದೆವ್ವ ಅಥವಾ ದೇವರ ಬಗ್ಗೆ ನಂಬಿಕೆ ಇದೆಯೋ, ಇಲ್ಲವೋ ಬೇರೆ ಮಾತು. ಅದನ್ನು ಸಲಕರೆಯಾಗಿ ಬಳಸಿಕೊಂಡು ಒಂದು ಕಥೆ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಅದರ ಮೂಲಕ ಅನುಭವಗಳನ್ನು ಮತ್ತು ಸಂವಹನ ಹಂಚಿಕೊಳ್ಳುವುದಕ್ಕೆ ಸಾಧ್ಯವಾದರೆ ಯಾಕೆ ಮಾಡಬಾರದು’ ಎಂದರು.

‘ನಾವು ಯಾವಾಗಲೂ ಸೇಫ್‍ ಆಗಿದ್ದೇವೆ ಅಂದುಕೊಂಡಿರುತ್ತೇವೆ. ಒಂದು ರಸ್ತೆಗೆ ಬೆಂಕಿ ಅಂಟಿಕೊಂಡರೆ ನಮ್ಮ ಮನೆಗೆ ಏನೂ ಆಗುವುದಿಲ್ಲ ಎಂಬ ಭಾವನೆಯಲ್ಲಿರುತ್ತೇವೆ. ಅದು ನಮ್ಮ ಮನೆಯವರೆಗೂ ಬರಬಹುದು ಎಂದು ಯೋಚಿಸುವುದಿಲ್ಲ. ಅಲ್ಲಿಯವರೆಗೂ ಅಜಾಗರೂಕರಾಗಿಯೇ ಇರುತ್ತೇವೆ. ಆ ನಿಟ್ಟಿನಲ್ಲಿ ಜಾಗರೂಕತೆಯನ್ನು ಮೂಡಿಸುವ ಪ್ರಯತ್ನ ಈ ಸಿನಿಮಾ. ಈ ಕಥೆ ಒಪ್ಪುವುದಕ್ಕೆ ಕಾರಣ, ನಾನು ನಂಬಿರುವ ವಿಷಯವನ್ನು ಈ ಚಿತ್ರದಲ್ಲಿ ಹೇಳಬಹುದು ಎಂಬ ಕಾರಣಕ್ಕಾಗಿ. ಜೊತೆಗೆ ಇದು ಮಾತನಾಡಬೇಕಾದ ವಿಷಯ. ಮೂಲಭೂತ ವಿಷಯ ಆಹಾರ. ಆ ಆಹಾರದ ಬಗ್ಗೆ ನಾವು ಹೆಚ್ಚು ಗಮನಹರಿಸುತ್ತಿಲ್ಲ. ಈ ಅರ್ಥವ್ಯವಸ್ಥೆ ನಮ್ಮನ್ನು ಓಡೋದಕ್ಕೆ ಪ್ರೇರೇಪಿಸುತ್ತಿದೆ. ನಿಂತು ನಮ್ಮ ತಟ್ಟೆಯಲ್ಲಿ ಏನಿದೆ. ಏನು ತಿನ್ನುತ್ತಿದ್ದೇವೆ, ಮಕ್ಕಳಿಗೆ ಏನು ತಿನ್ನುಸುತ್ತಿದ್ದೇವೆ ಎಂಬ ಬಗ್ಗೆ ನಾವು ಗಮನಹರಿಸುತ್ತಿಲ್ಲ. ಅದನ್ನು ಯೋಚನೆ ಮಾಡಿಸುವ ಚಿತ್ರ ಇದು’ ಎಂದರು ಕಿಶೋರ್.

ಈ ಚಿತ್ರವನ್ನು ನಿರ್ಮಿಸುವ ಜೊತೆಗೆ ಒಂದು ಪ್ರಮುಖ ಪಾತ್ರದಲ್ಲಿ ಪ್ರಸಾದ್‍ ವಸಿಷ್ಠ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪ್ರಿಯಾಂಕಾ ಮಳಲಿ, ಅವಿನಾಶ್‍, ಯೋಗರಾಜ್‍ ಭಟ್‍, ಪ್ರಶಾಂತ್‍ ಸಿದ್ದಿ, ಛಾಯಾಶ್ರೀ, ಶ್ರುತಿ ನಾಯಕ್‍ ಮುಂತಾದವರು ನಟಿಸಿದ್ದಾರೆ. ರಘೋತ್ತಮ ಎನ್‍.ಎಸ್ ಮತ್ತು ಶ್ರೇಯಸ್‍ ಬಿ. ರಾವ್‍ ಅವರ ಸಂಗೀತ ಈ ಚಿತ್ರಕ್ಕಿದೆ.

Tags: