ರಶ್ಮಿಕಾ ಮಂದಣ್ಣ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ತೇ ಅವರು ಹಿಂದಿಯ ‘ಕಾಕ್ಟೇಲ್ 2’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಇದೀಗ ಅವರು ‘ಮೈಸಾ’ ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೊಂದು ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
‘ಮೈಸಾ’ ಚಿತ್ರದ ಘೋಷಣೆ ಇತ್ತೀಚೆಗೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಆಗಿದೆ. ವಿಶೇಷವೆಂದರೆ, ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸೆಲೆಬ್ರಿಟಿ ಈ ಪೋಸ್ಟರ್ ಬಿಡುಡೆ ಮಾಡಿದ್ದಾರೆ. ತೆಲುಗಿನ ಪೋಸ್ಟರನ್ನು ನಿರ್ದೇಶಕ ಹನು ರಾಘವಪುಡಿ ಬಿಡುಗಡೆ ಮಾಡಿದರೆ, ತಮಿಳಿನಲ್ಲಿ ‘ಕುಬೇರ’ ನಟ ಧನುಷ್ ಬಿಡುಗಡೆ ಮಾಡಿದ್ದರೆ. ಕನ್ನಡದಲ್ಲಿ ಶಿವರಾಜಕುಮಾರ್, ಹಿಂದಿಯಲ್ಲಿ ವಿಕ್ಕಿ ಕೌಶಾಲ್ ಮತ್ತು ಮಲಯಾಳಂ ಪೋಸ್ಟರನ್ನು ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡಿ ರಶ್ಮಿಕಾ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದುವರೆಗೂ ಸಾಫ್ಟ್ ಆದಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ, ಈ ಚಿತ್ರದಲ್ಲಿ ಉಗ್ರವಾತಾರ ತಾಳಿರುವುದು ವಿಶೇಷ. ಈ ಚಿತ್ರವನ್ನು ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರವೀಂದ್ರ, ‘ಸುಮಾರು ಎರಡು ವರ್ಷಗಳ ಪರಿಶ್ರಮದಿಂದ ಈ ಕಥೆ ರೂಪುಗೊಂಡಿದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ಹೇಳಿದ್ದಾರೆ.
ಇದಲ್ಲದೆ, ತೆಲುಗಿನಲ್ಲಿ ‘ದಿ ಗರ್ಲ್‍ಫ್ರೆಂಡ್’ ಮತ್ತು ಹಿಂದಿಯಲ್ಲಿ ‘ತಮ’ ಎಂಬ ಎರಡು ಚಿತ್ರಗಳಲ್ಲಿ ರಶ್ಮಿಕಾ ಅಭಿನಯಿಸಿದ್ದು, ಈ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ.





