ಭಾರತೀಯ ಚಿತ್ರರಂಗದ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರೋ ‘ರಾಮಾಯಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈಗಾಗಲೇ ಯಶ್ ಸಹ ಒಂದು ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿ, ಇದೀಗ ಅಮೇರಿಕಾಗೆ ಹಾರಿದ್ದಾರೆ.
ಈ ಮಧ್ಯೆ, ಗುರುವಾರ ಬೆಳಿಗ್ಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದಾರೆ. ಸೀತೆಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ರಾವಣನ ಪಾತ್ರ ಮಾಡುತ್ತಿದ್ದಾರೆ ಯಶ್. ಸನ್ನಿ ಡಿಯೋಲ್, ಆಂಜನೇಯನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಲ್ಲಿ ನಿರ್ಮಾಣವಾಗುತ್ತಿದೆ.
‘ರಾಮಾಯಣ’ ಚಿತ್ರದ ಚಿತ್ರೀಕರಣ ಕಳೆದ ತಿಂಗಳಿನಿಂದ ಭರದಿಂದ ಸಾಗುತ್ತಿದ್ದು, ಚಿತ್ರೀಕರಣದಲ್ಲಿ ನಟ ಯಶ್ ಸಹ ಭಾಗವಹಿಸಿದ್ದಾರೆ. ಚಿತ್ರಕ್ಕಾಗಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಅದಕ್ಕಾಗಿ ಹಾಲಿವುಡ್‌ನ ಜನಪ್ರಿಯ ಸ್ಟಂಟ್ ನಿರ್ದೇಶಕ ಗೈ ನೋರಿಸ್ ಅವರನ್ನು ಕರೆಸಲಾಗಿದೆ. ಇದಕ್ಕೂ ಮೊದಲು ಹಾಲಿವುಡ್‍ನ ‘ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಮತ್ತು ದಿ ಸುಸೈಡ್ ಸ್ಕ್ವಾಡ್’ ಮುಂತಾದ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದ ನೋರಿಸ್, ಇದೇ ಮೊದಲ ಬಾರಿಗೆ ಭಾರತೀಯ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಮೊದಲ ಭಾಗವು 2026ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.





