Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

ರಾಜೇಶ್ ಮೊಮ್ಮಗನ ‘ಮುಜುಗರ’; ಚಿತ್ರಕ್ಕೆ ಚಾಲನೆ

ಕನ್ನಡದ ಜನಪ್ರಿಯ ನಟರಲ್ಲೊಬ್ಬರಾದ ರಾಜೇಶ್‍ ಅವರ ಮಗಳು ಆಶಾರಾಣಿ, ಶಿವರಾಜಕುಮಾರ್‍ ಅಭಿನಯದ ‘ರಥಸಪ್ತಮಿ’ ಚಿತ್ರಕ್ಕೆ ನಾಯಕಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರ ಮೊಮ್ಮಗ (ಮಗನ ಮಗ) ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ‘ಮುಜುಗರ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜೇಶ್ ಅವರ ಮೊಮ್ಮಗ ಸಾಯಿನಂದ್ ಅಭಿನಯದ ‘ಮುಜುಗರ’ ಚಿತ್ರವು ಇತ್ತೀಚೆಗೆ ಪ್ರಾರಂಭವಾಯಿತು, ಶಾಂತ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ತರುಣ್ ಎನ್ (ಜ್ಯೋತಿಪ್ರಿಯ) ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಪ್ರಮೋದ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕಿ ಶಾಂತ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿದರು.

‘ಮುಜುಗರ’ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ತರುಣ್‍, ‘ನನಗೂ, ಚಿತ್ರರಂಗಕ್ಕೂ 20 ವರ್ಷಗಳ ನಂಟು. ನಾಗಾಭರಣ, ಅನಂತರಾಜು, ಅಮರ್ ಹಾಗೂ ‘ಕಂಠಿ’ ಭರತ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. ‘ಮುಜುಗರ’ ಕಾಫಿ ತೋಟದ ಸುತ್ತ ನಡೆಯುವ ಪ್ರೇಮ ಕಥೆ. ರಾಜೇಶ್ ಅವರ ಮೊಮ್ಮಗ ಸಾಯಿನಂದ್ ನಾಯಕನಾಗಿ, ನಿವಿಷ್ಕಾ ಪಾಟೀಲ್‍ ಹಾಗೂ ತನು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಎರಡನೇ ನಾಯಕನಾಗಿ ಸುಭಾಷ್ ಹಾಗೂ ವಿಲನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್.15ರಿಂದ ಸಕಲೇಶಪುರ, ಚಿಕ್ಕಮಗಳೂರು, ಹೊರನಾಡು, ಕಳಸ, ಮಡಿಕೇರಿ ಮುಂತಾದ ಕಡೆಯ ಚಿತ್ರೀಕರಣ ನಡೆಯಲಿದೆ’ ಎಂದರು.

ನಿರ್ಮಾಪಕರಿಗೆ ಇದು ಎರಡನೆಯ ಚಿತ್ರ. ಇದಕ್ಕೂ ಮೊದಲು ಅವರ ಸಂಸ್ಥೆಯಿಂದ ‘ಎಲ್ಲಿ ಆಡೋದು ನಾವು ಎಲ್ಲಿ ಆಡೋದು’ ಎಂಬ ಮಕ್ಕಳ ಚಿತ್ರ ತಯಾರಾಗಿತ್ತು. ಆ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿತ್ತು.

ತಾನು ನಟನಾಗಲು ತಾತ ರಾಜೇಶ್‍ ಅವರೇ ಸ್ಫೂರ್ತಿ ಎಂದ ಸಾಯಿನಂದ್‍, ‘ಇಂದು ಅವರಿದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಶಾಲೆಯಲ್ಲಿ ಅಭಿನಯ ಕಲಿತಿದ್ದೇನೆ. ಇದು ನಾಯಕನಾಗಿ ನನ್ನ ಮೊದಲ ಚಿತ್ರ. ಪಾತ್ರ ಬಹಳ ಚೆನ್ನಾಗಿದೆ’ ಎಂದರು.

‘ಮುಜುಗರ’ ಚಿತ್ರಕ್ಕೆ ಜೈಆನಂದ್ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

Tags:
error: Content is protected !!