Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

‘ದೂರದರ್ಶನ’ ನಿರ್ದೇಶಕರ ಚಿತ್ರದಲ್ಲಿ ‘ಪೀಟರ್’ ಆದ ರಾಜೇಶ್‍ ಧ್ರುವ

‘ಅಗ್ನಿಸಾಕ್ಷಿ’, ‘ನಂದಿನಿ’ ಮುಂತಾದ ಧಾರಾವಾಹಿಗಳಲ್ಲಿ ಜನಪ್ರಿಯರಾಗಿದ್ದ ನಟ ರಾಜೇಶ್‍ ಧ್ರುವ, ಕಳೆದ ವರ್ಷ ‘ಬಾಲಾಜಿ ಫೋಟೋ ಸ್ಟುಡಿಯೋ’ ಎಂಬ ಚಿತ್ರವನ್ನು ನಿರ್ದೇಶಿಸವುದರ ಜೊತೆಗೆ, ಅದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ. ಈಗ ಅವರು ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ.

ಈ ಹಿಂದೆ ಪೃಥ್ವಿ ಅಂಬಾರ್ ಅಭಿನಯದ ‘ದೂರದರ್ಶನ’ ಚಿತ್ರವನ್ನು ನಿರ್ದೇಶಿಸಿದ್ದ ಸುಕೇಶ್‍ ಶೆಟ್ಟಿ, ಇದೀಗ ‘ಪೀಟರ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರದಲ್ಲಿ ರಾಜೇಶ್‍ ಧ್ರುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರದ ‘ಸುಂದರಿ ಸುಂದರಿ…’ ಎಂಬ ಹಾಡು ಬಿಡಗುಡೆಯಾಗಿದೆ.

ಇದನ್ನು ಓದಿ : ಹಳೆ‌ಯ ಗರ್ಲ್ ಫ್ರೆಂಡ್‍ಗೆ ಪೃಥ್ವಿ ಅಂಬಾರ್ ಶುಭಾಶಯ: ಆಲ್ಬಂ ಸಾಂಗ್ ಬಿಡುಗಡೆ

‘ಪೀಟರ್’ ಚಿತ್ರಕ್ಕೆ ರಿತ್ವಿಕ್‍ ಮುರಳೀಧರ್ ಸಂಗೀತ ಸಂಯೋಜಿಸಿದ್ದು, ನಾಲ್ಕು ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದೆ. ಥಿಂಕ್ ಮ್ಯೂಸಿಕ್ ‌ಕನ್ನಡ ಯೂಟ್ಯೂಬ್ ಚಾನಲ್‍ನಲ್ಲಿ ‘ಸುಂದರಿ ಸುಂದರಿ’ ಎಂಬ ಗೀತೆಯನ್ನು ಅನಾವರಣ ಮಾಡಲಾಗಿದೆ. ನಾಗಾರ್ಜುನ ಶರ್ಮಾ ಬರೆದ ಹಾಡು ಇದಾಗಿದ್ದು, ಕಪಿಲ್ ಕಪಿಲನ್ ಹಾಗೂ ಸುನಿಧಿ ಗಣೇಶ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ರಾಜೇಶ್ ಧ್ರುವ ಹಾಗೂ ರವೀಕ್ಷಾ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುಕೇಶ್‍ ಶೆಟ್ಟಿ, ‘ಈ ಚಿತ್ರದ ಶೇ. ‌50ರಷ್ಟು ಮಳೆಯಲ್ಲಿ ಶೂಟಿಂಗ್ ನಡೆಸಲಾಗಿದೆ. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೊಂದು ಕ್ರೈಮ್‍ ಥ್ರಿಲ್ಲರ್‍ ಚಿತ್ರವಾಗಿದ್ದು, ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ‘ಪೀಟರ್’ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದ ವಾದ್ಯವಾಗಿರುವ ಚೆಂಡೆ ಮೇಳವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ’ ಎಂದರು.

‘ಪೀಟರ್’ ಚಿತ್ರದಲ್ಲಿ ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ಮುಂತಾದವರು ನಟಿಸಿದ್ದಾರೆ. ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ಅಡಿ ‘ಪೀಟರ್’ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags:
error: Content is protected !!